ಧಾರವಾಡ: ಮೈಸೂರು ದಸರಾ ಜಂಬೂ ಸವಾರಿಯ ಮೆರವಣಿಗೆಯಲ್ಲಿ ಸಾಗುವ ಸ್ತಬ್ದಚಿತ್ರಗಳು ಕನ್ನಡ ನಾಡಿನ ಸಾಹಿತ್ಯ, ಸಂಸ್ಕೃತಿ, ಪರಿಸರ ಹಾಗೂ ಇತರ ಪರಂಪರೆಗಳನ್ನು ಬಿಂಬಿಸುವ ಮೂಲಕ ಜನರ ಗಮನ ಸೆಳೆಯುತ್ತವೆ. ಧಾರವಾಡ ಜಿಲ್ಲೆಯ ಸಂಗೀತ, ಸಾಹಿತ್ಯ ಮತ್ತು ಸಂಸ್ಕೃತಿ ಶ್ರೀಮಂತಿಕೆಯನ್ನು ಬಿಂಬಿಸುವ ಸ್ತಬ್ದಚಿತ್ರ ನಿರ್ಮಿಸಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ ಹೇಳಿದರು.
ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ, ಮೈಸೂರು ದಸರಾ ಕಾರ್ಯಕ್ರಮದ ಮೆರವಣಿಗೆಯಲ್ಲಿ ಸ್ತಬ್ದಚಿತ್ರ ಭಾಗವಹಿಸುವ ಮತ್ತು ವಸ್ತುಪ್ರದರ್ಶನದಲ್ಲಿ ಮಳಿಗೆ ಸ್ಥಾಪಿಸುವ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಜರುಗಿಸಿ ಅವರು ಮಾತನಾಡಿದರು.
ಮೈಸೂರು ದಸರಾ ಮಹೋತ್ಸವ ಬರುವ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5ರ ವರೆಗೆ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.
ವಿಜಯದಶಮಿ ಜಂಬೂಸವಾರಿ ಮೆರವಣಿಗೆಯು ಅಕ್ಟೋಬರ್ 5 ರಂದು ನಡೆಯಲಿದೆ. ಜಂಬೂಸವಾರಿ ಮೆರವಣಿಗೆಯಲ್ಲಿ ಜಿಲ್ಲೆಯಿಂದ ಸ್ತಬ್ದಚಿತ್ರ ಭಾಗವಹಿಸಲಿದೆ. ಮೆರವಣಿಗೆಯಲ್ಲಿ ಕಲೆ, ವಾಸ್ತುಶಿಲ್ಪ ಮತ್ತು ಸಂಸ್ಕೃತಿ ಬಿಂಬಿಸುವ, ಪರಿಸರ, ಅರಣ್ಯೀಕರಣ, ಅಂರ್ಜಲ, ಪರಿಸರ ಸ್ನೇಹಿ, ಪ್ರವಾಸೋದ್ಯಮ, ಸಂವಿಧಾನ, ಸಮಾನತೆ ಹಾಗೂ ಕೋಮು ಸಾಮರಸ್ಯ ಬಿಂಬಿಸುವ ಸ್ತಬ್ದಚಿತ್ರಗಳನ್ನು ರೂಪಿಸಿ, ಪ್ರದರ್ಶಿಸಲಾಗುತ್ತದೆ.
ಇದಕ್ಕೆ ಸಂಬಂದಿಸಿದಂತೆ ಅಧಿಕಾರಿಗಳು ತಕ್ಷಣ ಕ್ರಮವಹಿಸಬೇಕು. ಧಾರವಾಡ ಜಿಲ್ಲೆಯ ಸಂಸ್ಕೃತಿ, ಸಾಹಿತ್ಯ, ಪರಿಸರ, ನಾಡು-ನುಡಿ ಬಿಂಬಿಸುವ ಸ್ತಬ್ದಚಿತ್ರಗಳನ್ನು ರೂಪಿಸಬೇಕು ಎಂದು ಜಿ.ಪಂ.ಸಿಇಓ ಡಾ.ಸುರೇಶ ಇಟ್ನಾಳ ತಿಳಿಸಿದರು.
Kshetra Samachara
17/08/2022 07:49 pm