ಧಾರವಾಡ: 12ನೇ ಶತಮಾನದಲ್ಲಿ ಕಾಯಕಕ್ಕೆ ಒತ್ತು ನೀಡುವ ಮೂಲಕ ಕೊರಚ, ಕೊರವ ಸಮುದಾಯದ ಸಾಂಸ್ಕೃತಿಕ ಪ್ರತಿನಿಧಿಯಾಗಿ ಕಾಯಕದ ಮಹತ್ವವನ್ನು ಸಾರಿದ ನುಲಿಯ ಚಂದಯ್ಯನವರು ಕಾಯಕದಲ್ಲಿಯೇ ದೇವರನ್ನು ಕಂಡ ಮಹಾಶರಣರು ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ಧಾರವಾಡ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ ಶಿವಶರಣ ನುಲಿಯ ಚಂದಯ್ಯನವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಲ್ಯಾಣ ನಾಡಿನ ಶ್ರೇಷ್ಠ ಶರಣ, ಅನುಭಾವಿ, ವಚನಕಾರ ನುಲಿಯ ಚಂದಯ್ಯನವರು ಕಾಯಕ ನಿಷ್ಠೆ ಶಿವನಿಗೆ ಅರ್ಪಿತವಾಗುತ್ತದೆ ಎಂದು ಅಚಲವಾಗಿ ನಂಬಿ ಅದರಂತೆ ನಡೆದರು. ಪೂಜೆ, ಪುನಸ್ಕಾರಗಳಿಗಿಂತ ಕಾಯಕನಿಷ್ಠೆಯೇ ಮೇಲು ಎಂದು ಸಾರಿದವರು. ಅಂತಹ ಮಹಾನ್ ಶರಣರ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.
ಸಾಹಿತಿ ನಾರಾಯಣ ಬಿ.ಭಜಂತ್ರಿ ಮಾತನಾಡಿ, 12 ನೇ ಶತಮಾನದಲ್ಲಿದ್ದ ಕಾಯಕನಿಷ್ಠ ಯೋಗಿ ಹಾಗೂ ನಿಜಾನುಭಾವಿ ಶರಣ ನುಲಿಯ ಚಂದಯ್ಯನವರು. ತಮ್ಮ ವಚನಗಳ ಮೂಲಕ ಕಾಯಕ ಕಡ್ಡಾಯ ಎಂಬ ಆಶಯ ಸಾರುತ್ತವೆ. ಗುರು, ಲಿಂಗ, ಜಂಗಮ ತತ್ವವನ್ನು ಜಗತ್ತಿಗೆ ಪಸರಿಸಿ, ನುಡಿದಂತೆ ನಡೆದ ಶ್ರೇಷ್ಠ ವಚನಕಾರ ನುಲಿಯ ಚಂದಯ್ಯನವರು. ಬಸವಣ್ಣನವರ ಸಾಮಾಜಿಕ ಸಮಾನತೆಯ ವಿಚಾರ ಧಾರೆ, ಚಿಂತನೆಗೆ ಆಕರ್ಷಿತರಾಗಿ ಕಲ್ಯಾಣಕ್ಕೆ ತೆರಳಿ ಕಾಯಕ ಜೀವಿಯಾಗಿ, ದಾಸೋಹ ಮಾಡುತ್ತ ಬದುಕಿದರು. ದೇವರಿಗೆ ಕಾಯಕ ಪ್ರತಿಫಲದ ಪ್ರಜ್ಞೆಯ ಪಾಠ ಮಾಡಿದ ಶ್ರೇಷ್ಠ ಅನುಭಾವಿ. ನುಲಿಯ ಚಂದಯ್ಯ ದಲಿತ ವರ್ಗದ ಹೆಮ್ಮೆಯ ವಚನಕಾರ ಎಂದರು.
ಭೈರನಟ್ಟಿ ವಿರಕ್ತಮಠದ ಶಾಂತಲಿಂಗ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ, ಜಿಲ್ಲಾ ಕೊರಮ ಸಮಾಜದ ಅಧ್ಯಕ್ಷ ನಾರಾಯಣ ಭಜಂತ್ರಿ,ಮುಖಂಡರಾದ ಬಸವರಾಜ ಕೊರವರ, ಹನಮಂತ ಕೊರವರ, ಮಾರುತಿ ಮಾಕಡವಾಲೆ, ರಾಮಣ್ಣ ಹಂಚಿನಮನಿ ಹಾಗೂ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.
Kshetra Samachara
12/08/2022 06:00 pm