ಧಾರವಾಡ: ರಾಜ್ಯ ಸರ್ಕಾರವು ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಲು ಅಮೃತ ಮಹೋತ್ಸವದ ಅಂಗವಾಗಿ ಅಮೃತ ಯೋಜನೆಯಡಿ ಸ್ತ್ರೀ ಶಕ್ತಿ ಸಂಘಗಳಿಗೆ ಒಂದು ಲಕ್ಷ ರೂಪಾಯಿಗಳ ಬೀಜಧನ ನೀಡಲಾಗುತ್ತಿದೆ. ಇದನ್ನು ಸದುಪಯೋಗ ಪಡಿಸಿಕೊಂಡು ಇತರ ಸ್ತ್ರೀ ಶಕ್ತಿ ಸಂಘಗಳಿಗೆ ಮಾದರಿ ಆಗಬೇಕೆಂದು ಶಾಸಕ ಅಮೃತ ದೇಸಾಯಿ ಅವರು ಹೇಳಿದರು.
ಧಾರವಾಡದ ಆಲೂರು ವೆಂಕಟರಾವ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ತಾಲೂಕು ಮಹಿಳಾ ಒಕ್ಕೂಟ ಸಂಯುಕ್ತವಾಗಿ ಆಯೋಜಿಸಿದ್ದ ಅಮೃತ ಮಹೋತ್ಸವ ಯೋಜನೆಯಡಿ ಕಿರು ಉದ್ದಿಮೆಗಾಗಿ ಸ್ತ್ರೀ ಶಕ್ತಿ ಗುಂಪುಗಳಿಗೆ ಒಂದು ಲಕ್ಷ ರೂಪಾಯಿಗಳ ಬೀಜಧನದ ಚೆಕ್ ವಿತರಿಸಿ ಅವರು ಮಾತನಾಡಿದರು.
ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದ ಸ್ತ್ರೀ ಶಕ್ತಿ ಸಂಘದ ಸದಸ್ಯರು ಅಮೃತ ಮಹೋತ್ಸವ ಆಚರಣೆಗಾಗಿ ರಾಷ್ಟ್ರ ಧ್ವಜ ನಿರ್ಮಾಣ ಮಾಡುತ್ತಿರುವುದು ಇತರ ಸಂಘಗಳಿಗೆ ಮಾದರಿಯಾಗಿದೆ. ಸರ್ಕಾರ ಸ್ತ್ರೀ ಶಕ್ತಿ ಸಂಘಗಳ ಉದ್ದಿಮೆ, ಚಟುವಟಿಕೆ ವಿಸ್ತರಿಸಲು ಪ್ರೋತ್ಸಾಹ ನೀಡುತ್ತಿದೆ. ಸರ್ಕಾರ ನೀಡುವ ಸಹಾಯಧನ ಮತ್ತು ಸಂಘದ ಉಳಿತಾಯ ಹಣವನ್ನು ಸಂಘದ ಉದ್ದೇಶಗಳಿಗೆ ಮಾತ್ರ ಬಳಸಬೇಕು. ಆ ಮೂಲಕ ಸ್ತ್ರೀ ಶಕ್ತಿಯ ಸ್ವಾವಲಂಭಿ ಸಮಾಜ ನಿರ್ಮಾಣವಾಗಬೇಕು.
ಕೆಲವು ಸ್ತ್ರೀ ಶಕ್ತಿ ಸಂಘದ ಸದಸ್ಯರು ಹೆಚ್ಚಿನ ಲಾಭದ ಆಸೆಗಾಗಿ ಸಂಘದ ಹಣವನ್ನು ಹೆಚ್ಚಿನ ಬಡ್ಡಿಗಾಗಿ ಅಥವಾ ಸಂಘದ ಸದಸ್ಯರಲ್ಲದವರಿಗೆ ನೀಡುತ್ತಿರುವುದು ಕಂಡು ಬಂದಿದೆ. ಇದು ಸ್ತ್ರೀ ಶಕ್ತಿ ಬಲವರ್ಧನೆಯ ಕಲ್ಪನೆಗೆ ವಿರುದ್ಧವಾಗಿದೆ. ಸದಸ್ಯರು ಈ ಕುರಿತು ಎಚ್ಚರಿಕೆವಹಿಸಬೇಕೆಂದು ಶಾಸಕ ಅಮೃತ ದೇಸಾಯಿ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಾ.ಎಚ್.ಎಚ್.ಕುಕನೂರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯ ಸರ್ಕಾರವು ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ಸ್ತ್ರೀ ಶಕ್ತಿ ಸಂಘದ ಸದಸ್ಯರ ಉದ್ದಿಮೆ ಚಟುವಟಿಕೆಗಳನ್ನು ವಿಸ್ತರಿಸಿ, ಪ್ರೋತ್ಸಾಹಿಸಲು ಒಂದು ಲಕ್ಷ ರೂಪಾಯಿಗಳ ಬೀಜಧನ ವಿತರಿಸಲಾಗುತ್ತಿದೆ.
ಧಾರವಾಡ ಜಿಲ್ಲೆಯ 160 ಸ್ತ್ರೀ ಶಕ್ತಿ ಸಂಘಗಳಿಗೆ ಅಮೃತ ಯೋಜನೆಯಡಿ ಒಂದು ಲಕ್ಷ ರೂಪಾಯಿಗಳ ಬೀಜಧನದ ಚೆಕ್ ವಿತರಿಸಲಾಗಿದೆ. ಸರ್ಕಾರದ ಈ ಯೋಜನೆ ಸದುಪಯೋಗಪಡಿಸಿಕೊಂಡು ಮಹಿಳೆಯರು ಸ್ವಾವಲಂಭಿ ಆಗಬೇಕು ಎಂದು ಅವರು ಹೇಳಿದರು.
ತಹಶೀಲ್ದಾರ ಸಂತೋಷ ಹಿರೇಮಠ, ತಾಲೂಕಾ ಮಹಿಳಾ ಒಕ್ಕೂಟದ ಪ್ರತಿನಿಧಿಗಳಾದ ಸೋನಿಯಾ ಬ್ಯಾಳಿ, ಶಾರದಾ ಶಿನಗಾರಿ, ಗಂಗವ್ವ ಮೌನೇಶ, ಸುಶೀಲಾ ಪೂಜಾರ ಇದ್ದರು.
Kshetra Samachara
10/08/2022 06:46 pm