ಧಾರವಾಡ: ಎದೆಹಾಲು ಮಕ್ಕಳಿಗೆ ಅಮೃತ ಸಮಾನ. ಪ್ರತಿ ತಾಯಿಯು ತನ್ನ ಮಗುವಿಗೆ ತಪ್ಪದೇ ಎದೆಹಾಲು ಉಣಿಸಬೇಕು. ಇದರಿಂದ ಮಗುವಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿ, ಅನೇಕ ರೋಗಗಳಿಂದ ಕಾಪಾಡಬಹುದು ಎಂದು ಜಿಲ್ಲಾಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಟಿ.ಎ. ಶೇಪೂರ ಅವರು ಹೇಳಿದರು.
ಅವರು ಇಂದು ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹಿಳೆ ಗರ್ಭಿಣಿ ಆದಾಗಿನಿಂದ ಎದೆಹಾಲಿನ ಮಹತ್ವವನ್ನು ವೈದ್ಯರು, ಮನೆಯಲ್ಲಿನ ಹಿರಿಯರು ತಿಳಿಸಬೇಕು ಮತ್ತು ಉತ್ತಮ ಗುಣಮಟ್ಟದ ಆಹಾರವನ್ನು ಆರಂಭದಿಂದಲೇ ಗರ್ಭಿಣಿಗೆ ನೀಡಬೇಕು. ಹೆರಿಗೆಯ ನಂತರದ ಆರು ತಿಂಗಳವರೆಗೆ ಮಗುವಿಗೆ ಎದೆಹಾಲನ್ನು ಮಾತ್ರ ಉಣಿಸಬೇಕು. ಮಗುವಿಗೆ ಎದೆಹಾಲು ಕುಡಿಸುವುದರಿಂದ ತಾಯಿಯ ಆರೋಗ್ಯವು ಸುಧಾರಿಸುತ್ತದೆ ಎಂದು ಅವರು ಹೇಳಿದರು.
ಮಗುವಿಗೆ ಎದೆಹಾಲು ಉಣಿಸುವುದರಿಂದ ಸೌಂದರ್ಯ, ದೈಹಿಕ ಸಾಮರ್ಥ್ಯ ಕಡಿಮೆಯಾಗುತ್ತದೆ ಎಂಬ ಅನೇಕ ಗೊಂದಲ, ಪೂರ್ವಾಗ್ರಹಗಳು ಮಹಿಳೆಯರಲ್ಲಿ ಇರುತ್ತವೆ. ಇವುಗಳನ್ನು ಹೋಗಲಾಡಿಸಲು ವೈದ್ಯರು, ಮನೆಯ ಪಾಲಕರು ಆರಂಭದಿಂದ ಪ್ರಯತ್ನಿಸಬೇಕು. ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ಸ್ತನ್ಯಪಾನ ಕಾರ್ಯಕ್ರಮದ ಮೂಲಕ ಮಹಿಳೆಯರಲ್ಲಿ ಎದೆಹಾಲಿನ ಮಹತ್ವ ಕುರಿತು ಅರಿವು ಮೂಡಿಸಲು ಪ್ರಯತ್ನಿಸುತ್ತಿದೆ ಎಂದು ಅವರು ತಿಳಿಸಿದರು.
ಜನಿಸಿದ ಮಗುವಿಗೆ 6 ತಿಂಗಳು ತುಂಬುವವರೆಗೆ ತಾಯಿಯು ಎದೆಹಾಲನ್ನು ಮಾತ್ರ ಉಣಿಸಬೇಕು. ಮತ್ತು 6 ತಿಂಗಳಿಂದ 2 ವರ್ಷದವರೆಗೆ ಎದೆಹಾಲಿನೊಂದಿಗೆ ಪೂರಕ ಆಹಾರವನ್ನು ನೀಡಬೇಕು. ಇದರಿಂದ ಮಗು ಸದೃಢವಾಗಿ, ಆರೋಗ್ಯಯುತವಾಗಿ ಬೆಳೆಯುವುದರೊಂದಿಗೆ ಮಗುವಿನ ಎಲ್ಲ ಅಂಗಾಂಗಗಳು ವಯಸ್ಸಿಗೆ ತಕ್ಕಂತೆ ಅಭಿವೃದ್ಧಿ ಹೊಂದುತ್ತವೆ. ಇದರಿಂದ ಮಗುವಿನ ಸಮಗ್ರ ಬೆಳವಣಿಗೆಗೆ ಸಾಧ್ಯವಾಗುತ್ತದೆ ಎಂದು ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಟಿ.ಎ.ಶೇಪೂರ ಹೇಳಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಿವಕುಮಾರ ಮಾನಕರ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ ತಾಯಿಯು ಮಗುವಿಗೆ ಎದೆಹಾಲು ನೀಡುವುದು ನೈಸರ್ಗಿಕ ಪ್ರಕ್ರಿಯೆ. ಭವಿಷ್ಯದಲ್ಲಿ ಮಗುವಿಗೆ ತಗಲುಬಹುದಾದ ವಿವಿಧ ರೀತಿಯ ರೋಗ ರುಜಿನಗಳಿಂದ ತಡೆಗಟ್ಟಬಹುದು. ತಾಯಂದಿರು ಎದೆಹಾಲು ಉಣಿಸಿ ಮಕ್ಕಳ ಆರೋಗ್ಯವನ್ನು ಕಾಪಾಡಬೇಕು. ಬಾಟಲ್ ಮೂಲಕ ಹೊರಗಿನ ಹಾಲು ಚಿಕ್ಕಮಕ್ಕಳಿಗೆ ನೀಡುವುದು ಆರೋಗ್ಯಕ್ಕೆ ಅಷ್ಟು ಉತ್ತಮವಲ್ಲ. ಅನಿವಾರ್ಯ ಕಾರಣಗಳಿಂದ ಮಗುವಿಗೆ ಎದೆಹಾಲು ಸಿಗದಿದ್ದಾಗ ಗೋವಿನ ಹಾಲಿನೊಂದಿಗೆ ಪೌಷ್ಠಿಕಾಂಶವಿರುವ ಆಹಾರವನ್ನು ವೈದ್ಯರ ಸಲಹೆ ಪಡೆದು ನೀಡಬೇಕು. ತಾಯಂದಿರಲ್ಲಿ ಮತ್ತು ಕುಟುಂಬ ಸದಸ್ಯರಲ್ಲಿ ಎದೆಹಾಲಿನ ಮಹತ್ವ ತಿಳಿಸುವುದಕ್ಕಾಗಿ ವಿಶ್ವ ಸ್ತನ್ಯಪಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಮಕ್ಕಳ ವಿಭಾಗದ ಸಮಾಲೋಚಕಿ ರೇಣುಕಾ ಮಲ್ಲನಗೌಡರ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತಾಯಂದಿರಿಗೆ ಹಾಗೂ ಮಹಿಳೆಯರಿಗೆ ವಿಶ್ವ ಸ್ತನ್ಯಪಾನ ಸಪ್ತಾಹ ಅಂಗವಾಗಿ ಪ್ರತಿಜ್ಞಾವಿಧಿ ಬೋಧಿಸಿದರು. ಮತ್ತು ಎದೆ ಹಾಲಿನ ಸಪ್ತಾಹದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
Kshetra Samachara
06/08/2022 06:51 pm