ಧಾರವಾಡ: ಧಾರವಡ ಜಿಲ್ಲೆಯ ಐದು ವರ್ಷದೊಳಗಿನ 2,13,000 ಮಕ್ಕಳಿಗೆ ಆಗಸ್ಟ್ 1 ರಿಂದ 15 ರವರೆಗೆ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕವನ್ನು ವಾರವನ್ನು ಆಚರಿಸಲಾಗುತ್ತಿದ್ದು, ಈ ಪಾಕ್ಷಿಕ ಸಂದರ್ಭದಲ್ಲಿ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಸಂದರ್ಭದಲ್ಲಿ ಐದು ವರ್ಷದೊಳಗಿನ ಪ್ರತಿ ಮಗುವಿನ ಮನೆಗೆ ಆರೋಗ್ಯ ಕಾರ್ಯಕರ್ತರು ಭೇಟಿ ನೀಡಿ ಒಂದು ಪ್ಯಾಕೇಟ್ ಓಆರ್‌ಎಸ್ ಮತ್ತು ಭೇಟಿ ನೀಡಿದ ಮನೆಯಲ್ಲಿ ಮಗುವಿಗೆ ಭೇದಿ ಆಗುತ್ತಿದ್ದರೆ ಒಂದು ಜಿಂಕ್ ಮಾತ್ರೆಯನ್ನು ನೀಡುತ್ತಾರೆ. ಹಾಗೂ ಮಗುವಿಗೆ ಅತಿಸಾರ ಭೇದಿ ಉಂಟಾದಾಗ ತಕ್ಷಣ ಆರೈಕೆಗಾಗಿ ಆರೋಗ್ಯ ಸುರಕ್ಷತಾ ಕ್ರಮಗಳನ್ನು ತಿಳಿಸಿಕೊಡಲಿದ್ದಾರೆ ಎಂದು ಅವರು ಹೇಳಿದರು.
ಜಿಲ್ಲಾ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮ ಅಧಿಕಾರಿಗಳು, ತಾಲೂಕಾ ವೈದ್ಯಾಧಿಕಾರಿಗಳು, ಸ್ಥಾನಿಕ ವೈದ್ಯಾಧಿಕಾರಿಗಳು ಮತ್ತು ಆರೋಗ್ಯ ಕಾರ್ಯಕರ್ತರು ಇಲಾಖಾ ಕಾರ್ಯಕ್ರಮಗಳನ್ನು ಉದ್ದೇಶ ಈಡೇರುವಂತೆ ನಿಗಾವಹಿಸಿ ಆಸಕ್ತಿಯಿಂದ ಮಾಡಬೇಕು. ಜಿಲ್ಲೆಯಲ್ಲಿ ಶಿಶುಮರಣ, ತಾಯಿಮರಣ ಕಡಿಮೆಯಾಗುವಂತೆ ಅಗತ್ಯ ಚಿಕಿತ್ಸೆಯನ್ನು ತಕ್ಷಣ ನೀಡಲು ಕ್ರಮವಹಿಸಬೇಕೆಂದು ಅವರು ಸೂಚಿಸಿದರು.
ಜಿಲ್ಲೆಯಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಕೋವಿಡ್ ಮುಂಜಾಗ್ರತಾ ಲಸಿಕಾಕರಣವನ್ನು ಹೆಚ್ಚಿಸಬೇಕು. ಪ್ರತಿವಾರದ ಮೂರು ದಿನ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಗ್ರಾಮ ಹಾಗೂ ವಾರ್ಡ್ ಮಟ್ಟದ ಅಧಿಕಾರಿ ಮತ್ತು ಸಿಬ್ಬಂದಿ, ಸಂಸ್ಥೆ ಹಾಗೂ ಇತರ ಸಂಘಟನೆಗಳ ಸಹಕಾರದಲ್ಲಿ ವಿಶೇಷ ಯೋಜನೆ ರೂಪಿಸಿಕೊಂಡು ಲಸಿಕಾಕರಣ ಯಶಸ್ವಿಗೊಳಿಸಬೇಕೆಂದು ಅವರು ಹೇಳಿದರು.
Kshetra Samachara
28/07/2022 08:04 pm