ಧಾರವಾಡ: ಸರ್ಕಾರಿ ನೌಕರರ ಕುಂದುಕೊರತೆಗಳನ್ನು ಬಗೆಹರಿಸಲು ಕ್ರಮವಹಿಸಲಾಗುವುದು. ಕೆಲವು ಬೇಡಿಕೆಗಳನ್ನು ಜಿಲ್ಲಾ ಹಂತದಲ್ಲಿ ಪರಿಹರಿಸಲಾಗುವುದು ಮತ್ತು ಉಳಿದವುಗಳನ್ನು ರಾಜ್ಯಮಟ್ಟಕ್ಕೆ ಪ್ರಸ್ತಾವನೆ ಕಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸರಕಾರಿ ನೌಕರ ಕುಂದುಕೊರತೆಗಳ ನಿವಾರಣೆಗಾಗಿ ರಚನೆಗೊಂಡಿರುವ ಜಿಲ್ಲಾಮಟ್ಟದ ಜಂಟಿ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನೌಕರರು ಕಚೇರಿ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಸಾರ್ವಜನಿಕರಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಸರಕಾರದ ಜನಪರ ಯೋಜನೆಗಳನ್ನು ಅರ್ಹರಿಗೆ ತಲುಪಿಸಬೇಕೆಂದು ಅವರು ಹೇಳಿದರು.
ನೌಕರರಿಗೆ ಕುಂದುಕೊರತೆ ಉಂಟಾಗದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇಲಾಖಾ ಮಟ್ಟದಲ್ಲಿ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ ಅವರು ಮಾತನಾಡಿ, ಜಿಲ್ಲಾ ಪಂಚಾಯತ ಹಂತದಲ್ಲಿ ನೌಕರರ ಎಲ್ಲ ಬೇಡಿಕೆ ಇಡೆರಿಸಲಾಗುವುದು. ನೌಕರರ ವಸತಿಗೃಹ ರಿಪೇರಿ ಕಾರ್ಯವನ್ನು ಜಿಲ್ಲಾ ಪಂಚಾಯತ ಅನುದಾನದಲ್ಲಿ ಕೈಗೊಳ್ಳಲಾಗುತ್ತಿದೆ. ಡಿಎಚ್‍ಓ ಸೇರಿದಂತೆ ಇಲಾಖೆ ಅಧಿಕಾರಿಗಳು ಈ ಕುರಿತು ಮಾಹಿತಿ ಸಲ್ಲಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರು ಮಾತನಾಡಿ, ನೌಕರರ ಕಚೇರಿ ಕರ್ತವ್ಯಕ್ಕೆ ತೊಂದರೆ ಆಗದಂತೆ ಕ್ರಮವಹಿಸಲಾಗಿದೆ. ಇಲಾಖೆ ಕಾರ್ಯಗಳನ್ನು ನಿಯಮಾನುಸಾರ ಮಾಡಬೇಕು ಎಂದರು.
ನೌಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್.ಸಿದ್ದನಗೌಡರ ಅವರು ವಿವಿಧ ಇಲಾಖೆಗಳಲ್ಲಿನ ನೌಕರ ವಯಕ್ತಿಕ ಹಾಗೂ ಸಾಮೂಹಿಕ ಸಮಸ್ಯೆಗಳ ಕುರಿತು ವಿಷಯ ಮಂಡನೆ ಮಾಡಿದರು.
ಅವಳಿನಗರದಲ್ಲಿ ಜಾರಿಯಲ್ಲಿರುವ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸರಕಾರಿ ಕಚೇರಿಗಳನ್ನು ಸೇರಿಸಿ, ಸ್ಮಾರ್ಟ್ ಆಪೀಸ್ ಮಾಡಲು ಕ್ರಮವಹಿಸಬೇಕು. ಮಹಿಳಾ ನೌಕರರಿಗೆ ಕಚೇರಿಯಲ್ಲಿ ವಿಶ್ರಾಂತಿ ಕೊಠಡಿ, ಪ್ರತ್ಯೇಕ ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂದರು.
ಪಾರದರ್ಶಕ ಆಡಳಿತಕ್ಕೆ ಬಲ ತುಂಬಲು ಮಾಹಿತಿ ಹಕ್ಕು ಕಾಯ್ದೆ ಜಾರಿ ಆಗಿದೆ. ಆದರೆ ಅನೇಕರು ಅನಗತ್ಯವಾಗಿ ಆರ್.ಟಿ.ಐ ದುರ್ಬಳಕೆ ಮಾಡಿಕೊಂಡು ನೌಕರರು ಕರ್ತವ್ಯ ನಿರ್ವಹಿಸಲು ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಆದ್ದರಿಂದ ಎಲ್ಲ ಹಂತದ ನೌಕರರಿಗೆ ಆರ್.ಟಿ.ಐ. ಕಾಯ್ದೆ ಕುರಿತು ತರಬೇತಿ, ಅರಿವು ನೀಡಲು ಕ್ರಮವಹಿಸಬೇಕು ಮತ್ತು ಆರ್‍ಟಿಐ ದುರ್ಬಳಕೆಯನ್ನು ತಪ್ಪಿಸಲು ಸೂಕ್ತ ಕ್ರಮಕೈಗೊಳ್ಳಬೇಕೆಂದು ಹೇಳಿದರು.
ಸರಕಾರಿ ನೌಕರರ ವಸತಿಗೃಹಗಳ ದುರಸ್ತಿಗೆ ನಿರ್ದೇಶನ ನೀಡಬೇಕು ಮತ್ತು ಲಕಮನಹಳ್ಳಿ ಪ್ರದೇಶದಲ್ಲಿ ವಸತಿ ಸಮುಚ್ಚಯ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು. ಸರಕಾರಿ ನೌಕರರ ಕುಂದುಕೊರತೆಗಳನ್ನು ತಾಲೂಕು ಮಟ್ಟದಲ್ಲಿ ಆಲಿಸಿ, ಪರಿಹರಿಸಲು ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಬಗೆಹರಿಸಲು ಜಂಟಿ ಸಮಾಲೋಚನ ಸಭೆ ಆಯೋಜಿಸಲು ನಿರ್ದೇಶನ ನೀಡಬೇಕೆಂದು ಜಿಲ್ಲಾಧಿಕಾರಿಗಳಲ್ಲಿ ಎಸ್.ಎಫ್.ಸಿದ್ಧನಗೌಡರ ವಿನಂತಿಸಿದರು.
ಸರಕಾರಿ ನೌಕರ ಸಂಘದ ಹುಬ್ಬಳ್ಳಿ ತಾಲೂಕು ಘಟಕಕ್ಕೆ ಹುಬ್ಬಳ್ಳಿ ಮಿನಿವಿದಾನಸೌಧದಲ್ಲಿ ಸ್ಥಳಾವಕಾಶ ನೀಡಬೇಕು. ಮತ್ತು ಧಾರವಾಡ ಮಿನಿವಿಧಾನಸೌಧದಲ್ಲಿ ಸ್ವಚ್ಚತಾ ಕಾರ್ಯವನ್ನು ನಿರಂತರವಾಗಿ ಕೈಗೊಳ್ಳಲು ವಿನಂತಿಸಿದರು.
ನೌಕರ ಸಂಘದ ಜಿಲ್ಲಾ ಪ್ರದಾನ ಕಾರ್ಯದರ್ಶಿ ಎಸ್.ಜಿ.ಸುಬ್ಬಾಪುರಮಠ ಅವರು ಮಾತನಾಡಿ, ವಾಣಿಜ್ಯ ತೆರಿಗೆ ಇಲಾಖೆ ಕಟ್ಟಡದಲ್ಲಿ ಅಧಿಕಾರಿ, ಸಿಬ್ಬಂದಿಗಳಿಗೆ ಹೆಚ್ಚಿನ ಸ್ಥಳಾವಕಾಶ ಕಲ್ಪಿಸಬೇಕೆಂದು ತಿಳಿಸಿದರು.
Kshetra Samachara
19/07/2022 07:44 pm