ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

13,671 ಕೋಟಿ ರೂಪಾಯಿಗಳ ವಾರ್ಷಿಕ ಸಾಲ ಯೋಜನೆ ಬಿಡುಗಡೆ

ಧಾರವಾಡ: ಧಾರವಾಡ ಜಿಲ್ಲಾ ಲೀಡ್ ಬ್ಯಾಂಕ್ ಪ್ರಕಟಿಸಿರುವ 2022-23 ನೇ ಆರ್ಥಿಕ ವರ್ಷದ 13,671 ಕೋಟಿ ರೂಪಾಯಿಗಳ ಜಿಲ್ಲಾ ವಾರ್ಷಿಕ ಸಾಲ ಯೋಜನೆಯನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಬಿಡುಗಡೆ ಮಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳಡಿ ಫಲಾನುಭವಿ ವ್ಯಕ್ತಿಗಳ ಬ್ಯಾಂಕ್ ಖಾತೆಗಳನ್ನು ಅವರ ಸಾಲದ ಖಾತೆಗಳಿಗೆ ಜೋಡಣೆ ಮಾಡಬಾರದು. ಸರ್ಕಾರದ ಜನಕಲ್ಯಾಣ ಆಶಯಗಳ ಈಡೇರಿಕೆಗೆ ಬ್ಯಾಂಕುಗಳು ಕೈಜೋಡಿಸಬೇಕು ಎಂದು ಅವರು ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಸಲಹಾ ಸಮಿತಿ ಹಾಗೂ ಜಿಲ್ಲಾ ಮಟ್ಟದ ಬ್ಯಾಂಕರುಗಳ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪ್ರಧಾನಮಂತ್ರಿ ಸ್ವನಿಧಿ, ಸೂಕ್ಷ್ಮ ಆಹಾರ ಸಂಸ್ಕರಣ ಉದ್ಯಮಗಳ ಸ್ಥಾಪನೆ (ಪಿಎಂಎಫ್‍ಎಂಇ), ಪಶುಸಂಗೋಪನೆ ಮತ್ತು ಮೀನುಗಾರಿಕೆ, ಬೆಳೆಸಾಲ ಮನ್ನಾ, ಬೆಳೆವಿಮೆ, ಸಾಮಾಜಿಕ ಭದ್ರತಾ ಯೋಜನೆಗಳು, ಮುದ್ರಾ ಮತ್ತಿತರ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಫಲಾನುಭವಿಗಳಿಗೆ ಸರಳವಾಗಿ ಸೇವೆಗಳನ್ನು ನೀಡಬೇಕು. ಕನ್ನಡ ಭಾಷೆ ಬಲ್ಲ ಸಿಬ್ಬಂದಿ ಮತ್ತು ಅಧಿಕಾರಿಗಳು ಗ್ರಾಮೀಣ ಪ್ರದೇಶದ ಬ್ಯಾಂಕುಗಳಲ್ಲಿ ಸ್ಥಳೀಯರಿಗೆ ನೆರವಾಗಲು ಹೆಲ್ಪಡೆಸ್ಕ್ ಸ್ಥಾಪಿಸಬೇಕು. ಬ್ಯಾಂಕಿನಲ್ಲಿ ಚಲನ್ ಹಾಗೂ ಇತರ ವೋಚರ್‌ಗಳನ್ನು ಸ್ಥಳೀಯ ಕನ್ನಡ ಭಾಷೆಯಲ್ಲಿ ಗ್ರಾಹಕರಿಗೆ ಒದಗಿಸಬೇಕು. ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳಲ್ಲಿ ಫಲಾನುಭವಿಯಾಗಿ ಆಯ್ಕೆಯಾದ ಸಾರ್ವಜನಿಕರಿಗೆ ಆರ್ಥಿಕ ನೆರವು ನೀಡಲು ಬ್ಯಾಂಕುಗಳು ವಿಳಂಬ ಮಾಡಿದರೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ತಕ್ಷಣ ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರ ಮೂಲಕ ಬ್ಯಾಂಕಿನ ಶಾಖೆಗಳೊಂದಿಗೆ ಸಮನ್ವಯ ಸಾಧಿಸಿ ಸಮಸ್ಯೆ ಪರಿಹಾರಕ್ಕೆ ಸ್ಪಂದಿಸಬೇಕು. ಆಧಾರ್, ಮೊಬೈಲ್ ಸಂಖ್ಯೆ ಜೋಡಣೆ ಮೊದಲಾದ ಕಾರಣಗಳಿಂದ ಫಲಾನುಭವಿಗಳ ಅರ್ಜಿಗಳು ಬಾಕಿ ಇದ್ದರೆ ಬ್ಯಾಂಕವಾರು ಪಟ್ಟಿ ಮಾಡಿ ಅಗತ್ಯ ಮಾಹಿತಿ ಪೂರೈಸಿ ಅರ್ಜಿಯನ್ನು ವಿಲೇವಾರಿ ಮಾಡಬೇಕು. ಅರ್ಜಿ ತಿರಸ್ಕರಿಸಿದರೆ ಬ್ಯಾಂಕುಗಳು ಸಕಾರಣಗಳನ್ನು ತಕ್ಷಣ ಕೊಡಬೇಕು. ಫಲಾನುಭವಿಗಳಿಗೆ ಸಾಲ ಮಂಜೂರು ಮಾಡುವಾಗ ಅವರ ಸಿಬಿಲ್ ಸ್ಕೋರ್ ಪರಿಗಣಿಸಬಾರದು ಎಂಬ ನಿರ್ದೇಶನವಿದೆ, ಬ್ಯಾಂಕುಗಳು ಅದನ್ನು ಕಡ್ಡಾಯವಾಗಿ ಪಾಲಿಸಬೇಕು. ಅನವಶ್ಯಕವಾಗಿ ದಾಖಲೆಗಳನ್ನು ಕೇಳಿ ಫಲಾನುಭವಿಗಳನ್ನು ಅಲೆದಾಡಿಸದೇ ಸರಳವಾಗಿ ಸೇವೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ ಮಾತನಾಡಿ, ಮಹಿಳಾ ಸ್ವ-ಸಹಾಯ ಗುಂಪುಗಳ ಸದಸ್ಯೆಯರಿಗೆ ಅಧಿಕೃತ ಸಂಸ್ಥೆ ಮೂಲಕ ಬ್ಯಾಂಕಿಂಗ್ ಕರೆಸ್ಪಾಂಡೆಂಟ್ ಸಖಿ(ಬಿ.ಸಿ.ಸಖಿ) ತರಬೇತಿ ನೀಡಲಾಗಿದೆ. ಜಿಲ್ಲೆಯಲ್ಲಿ 138 ಮಹಿಳೆಯರು ತರಬೇತಿ ಪಡೆದಿದ್ದಾರೆ. ಅವರಲ್ಲಿ 50 ಜನ ಮಾತ್ರ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮವಾರು ಹಾಗೂ ಬ್ಯಾಂಕ್ ಶಾಖೆವಾರು ತರಬೇತಿ ಪಡೆದ ಮಹಿಳೆಯರು ಪಟ್ಟಿ ನೀಡಲಾಗುವುದು. ಬ್ಯಾಂಕುಗಳು ಅವರ ಸೇವೆಯನ್ನು ಬಳಸಿಕೊಳ್ಳಬೇಕು ಎಂದರು.

ನಬಾರ್ಡ್ ಜಿಲ್ಲಾ ವ್ಯವಸ್ಥಾಪಕ ಮಯೂರ ಕಾಂಬಳೆ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ವಾರ್ಷಿಕ ಸಾಲಯೋಜನೆಯ ಆದ್ಯತಾ ವಲಯಗಳ ಬೆಳವಣಿಗೆಯ ವಿಶ್ಲೇಷಣೆ ಮಾಡಿದರು.

ಬ್ಯಾಂಕ್ ಆಫ್ ಬರೋಡಾದ ಕ್ಷೇತ್ರೀಯ ವ್ಯವಸ್ಥಾಪಕ ರಾಜೇಶ, ಭಾರತೀಯ ರಿಜರ್ವ್ ಬ್ಯಾಂಕ್ ಅಭಿವೃದ್ಧಿ ವಿಭಾಗದ ವ್ಯವಸ್ಥಾಪಕ ಎಸ್.ಶಾಂತಪ್ರಕಾಶ ಮಾತನಾಡಿದರು. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಯೋಜನೆಗಳನ್ನು ಕಳೆದ ಸಾಲಿನಲ್ಲಿ ಉತ್ತಮವಾಗಿ ಅನುಷ್ಟಾನಗೊಳಿಸಿ ಪ್ರತಿಶತ 100 ರಷ್ಟು ಸಾಧನೆಗೈದ ಬ್ಯಾಂಕುಗಳ ಅಧಿಕಾರಿಗಳಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಆರ್.ಅಣ್ಣಯ್ಯ ಸಭೆ ನಿರ್ವಹಿಸಿದರು.

ವಾರ್ಷಿಕ ಸಾಲ ಯೋಜನೆ: 2022-23 ರ ವಾರ್ಷಿಕ ಸಾಲ ಯೋಜನೆಯು ಒಟ್ಟು 13,671 ಕೋಟಿ ರೂಪಾಯಿಗಳ ಗುರಿ ಹೊಂದಿದೆ. ಇದರಲ್ಲಿ 3,223 ಕೋಟಿ ರೂಪಾಯಿ ಕೃಷಿ ಸಾಲ, 1,647 ಕೋಟಿ ರೂಪಾಯಿ ಅಲ್ಪಾವಧಿ ಕೃಷಿಸಾಲ ಮತ್ತು ಪೂರಕ ಚಟುವಟಿಕೆಗಳಿಗೆ, 300 ಕೋಟಿ ರೂಪಾಯಿ ಕೃಷಿ ಮೂಲ ಸೌಕರ್ಯಗಳಿಗೆ ಹಾಗೂ 642 ಕೋಟಿ ರೂಪಾಯಿ ಕೃಷಿ ಸಹಾಯಕ ಚಟುವಟಿಕೆಗಳಿಗೆ ಸೇರಿ ಒಟ್ಟು 5,813 ಕೋಟಿ ರೂಪಾಯಿಗಳನ್ನು ಕೃಷಿ ವಲಯಕ್ಕೆ ಮೀಸಲಿಡಲಾಗಿದೆ. 5,150 ಕೋಟಿ ರೂಪಾಯಿಗಳನ್ನು ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ, 450 ಕೋಟಿ ರೂಪಾಯಿಗಳನ್ನು ರಫ್ತುಸಾಲಕ್ಕೆ, 314 ಕೋಟಿ ರೂಪಾಯಿ ಶೈಕ್ಷಣಿಕ ಸಾಲ ಯೋಜನೆ, 1,478 ಕೋಟಿ ರೂಪಾಯಿ ವಸತಿ ಯೋಜನೆ, 79 ಕೋಟಿ ರೂಪಾಯಿ ನವೀಕರಿಸಬಹುದಾದ ಇಂಧನ ಮೂಲಗಳಿಗೆ ಹಾಗೂ 387 ಕೋಟಿ ರೂಪಾಯಿಗಳನ್ನು ಮೂಲಭೂತ ಸೌಕರ್ಯಗಳು ಹಾಗೂ ಇತರೆ ಆದ್ಯತಾ ವಲಯಗಳಿಗೆ ನೀಡುವ ಗುರಿ ಹೊಂದಲಾಗಿದೆ.

ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಬಿ.ಎಸ್.ಮೂಗನೂರಮಠ, ಜಂಟಿ ಕೃಷಿ ನಿರ್ದೇಶಕ ರಾಜಶೇಖರ ಐ.ಬಿ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಸಿದ್ದಣ್ಣ, ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ.ಉಮೇಶ ಕೊಂಡಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಜಿಲ್ಲೆಯ ಎಲ್ಲಾ ಬ್ಯಾಂಕರ್‌ಗಳ ಸಭೆಯಲ್ಲಿ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

09/07/2022 06:42 pm

Cinque Terre

10.97 K

Cinque Terre

0

ಸಂಬಂಧಿತ ಸುದ್ದಿ