ಧಾರವಾಡ: ಮುಂಗಾರು ಹಂಗಾಮಿಗೆ ಧಾರವಾಡ ಜಿಲ್ಲೆಯಲ್ಲಿ 2,73,602 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆಗಳ ಬಿತ್ತನೆ ಗುರಿ ಹಾಕಿಕೊಳ್ಳಲಾಗಿದ್ದು, ಈವರೆಗೂ 2,58,585 ಹೆಕ್ಟೇರ ಪ್ರದೇಶದಲ್ಲಿ ಶೇ.95 ರಷ್ಟು ವಿವಿಧ ಕೃಷಿ ಬೆಳೆಗಳ ಬಿತ್ತನೆಯಾಗಿದೆ. ಹತ್ತಿ, ಹೆಸರು, ಮೆಕ್ಕೆಜೋಳ, ಸೋಯಾಬೀನ, ಶೇಂಗಾ, ಭತ್ತ, ಉದ್ದು, ಕಬ್ಬು ಜಿಲ್ಲೆಯ ಪ್ರಮುಖ ಬೆಳೆಗಳಾಗಿವೆ. ಮೆಕ್ಕೆಜೋಳ, ಹತ್ತಿ ಹಾಗೂ ಭತ್ತದ ಬೆಳೆಗಳ ಬಿತ್ತನೆ ಕಾರ್ಯ ಇನ್ನೂ ಪ್ರಗತಿಯಲ್ಲಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆಯಿಂದ 99 ಮನೆಗಳು ಭಾಗಶ: ಹಾನಿಯಾಗಿದ್ದು ಪರಿಹಾರ ಕಾರ್ಯ ಪ್ರಗತಿಯಲ್ಲಿದೆ.
ಮುಂಗಾರು ಹಂಗಾಮಿನಲ್ಲಿ ಸಹಾಯಧನದಲ್ಲಿ ಬಿತ್ತನೆ ಬೀಜ ವಿತರಿಸಲು ಜಿಲ್ಲೆಯ ವಿವಿಧ ಸ್ಥಳಗಳಲ್ಲಿ 14 ರೈತ ಸಂಪರ್ಕ ಕೇಂದ್ರ ಹಾಗೂ 14 ಹೆಚ್ಚುವರಿ ಮಾರಾಟ ಕೇಂದ್ರಗಳನ್ನು ತೆರೆಯಲಾಗಿದ್ದು ಈವರೆಗೂ 22350 ಕ್ವಿಂಟಲ್‍ನಷ್ಟು ಬಿತ್ತನೇ ಬೀಜ ಸಂಗ್ರಹಿಸಿ 15,850 ಕ್ವಿಂಟಲ್‍ನಷ್ಟು ಬೀಜ ವಿತರಣೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಜುಲೈ ತಿಂಗಳ (ಜು.8) ಇಲ್ಲಿಯರೆಗೂ 36.2 ಮಿ.ಮೀ ವಾಡಿಕೆ ಮಳೆಗೆ 59.1 ಮಿ.ಮೀ ದಷ್ಟು ಮಳೆ ದಾಖಲಾಗಿದೆ. ಜೂನ್‍ನಲ್ಲಿ 125 ಮಿ.ಮೀ ವಾಡಿಕೆ ಮಳೆಗೆ 94 ಮಿ.ಮೀ ಮಳೆಯಾಗಿದ್ದು 25 ಪ್ರತಿಶತ ಮಳೆ ಕಡಿಮೆಯಾಗಿತ್ತು. ಜೂನ್ ತಿಂಗಳಿನಿಂದ ಜುಲೈ 8 ರವರೆಗೆ 161 ಮಿ.ಮೀ ವಾಡಿಕೆ ಮಳೆಗೆ, ಇಲ್ಲಿಯವರೆಗೆ 153.1 ಮಿ.ಮೀ ಮಳೆಯಾಗಿದೆ. ಮುಂದಿನ 3 ದಿನಗಳವರೆಗೆ 15.6 ಮಿ.ಮೀ ದಿಂದ 64.4 ಮಿ.ಮೀ ವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ ಎಂದು ಅವರು ತಿಳಿಸಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಇಲ್ಲಿಯವರೆಗೂ ಯೂರಿಯಾ 16,128 ಮೆಟ್ರಿಕ್‍ಟನ್, ಡಿ.ಎ.ಪಿ 13,409 ಮೆಟ್ರಿಕ್‍ಟನ್, ಹಾಗೂ 7,607 ಮೆಟ್ರಿಕ್‍ಟನ್, ಕಾಂಪ್ಲೆಕ್ಸ ಮತು ಇತರೆ ಗೊಬ್ಬರ ಸೇರಿ 37,144 ಮೆಟ್ರಿಕ್‍ಟನ್, ರಸಗೊಬ್ಬರ ಮಾರಾಟವಾಗಿದೆ.
ಪ್ರಸ್ತುತದಲ್ಲಿ ಜಿಲ್ಲೆಯಲ್ಲಿ 3,589 ಮೆಟ್ರಿಕ್‍ಟನ್ ಯೂರಿಯಾ, 1,483 ಮೆಟ್ರಿಕ್‍ಟನ್ ಡಿ.ಎ.ಪಿ., 833 ಮೆಟ್ರಿಕ್‍ಟನ್ ಎಮ್.ಓ.ಪಿ, 3,276 ಮೆಟ್ರಿಕ್‍ಟನ್ ಕಾಂಪ್ಲೇಕ್ಸ್ ಹಾಗೂ 240 ಮೆಟ್ರಿಕ್‍ಟನ್ ಎಸ್.ಎಸ್.ಪಿ. ರಸಗೊಬ್ಬರ ಒಳಗೊಂಡಂತೆ 9,422 ಮೆಟ್ರಿಕ್‍ಟನ್ ರಸಗೊಬ್ಬರ ಲಭ್ಯವಿದ್ದು, ರೈತರ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ಪೂರೈಕೆಗೆ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ನೊಂದಾಯಿಸಲು ಎಲ್ಲಾ ಬೆಳೆಗಳಿಗೆ ಜುಲೈ-31 ಕೊನೆಯ ದಿನಾಂಕವಾಗಿದೆ. ಕೆಂಪು ಮೆಣಸಿನಕಾಯಿ (ಮಳೆಯಾಶ್ರಿತ ಮತ್ತು ನೀರಾವರಿ) ಬೆಳೆಗೆ ಅಗಸ್ಟ-16 ಅಂತಿಮ ದಿನಾಂಕವಾಗಿರುತ್ತದೆ. ಈವರೆಗೆ ಜಿಲ್ಲೆಯಾದ್ಯಂತ 25,617 ರೈತರು ಫಸಲಾ ಬಿಮಾ ಯೋಜನೆಯಡಿ ನೊಂದಾಯಿಸಿಕೊಂಡಿದ್ದಾರೆ. ಮತ್ತು 25,194 ಹೆಕ್ಟೇರ ಪ್ರದೇಶವು ಬೆಳೆ ವಿಮೆ ಯೋಜನೆಗೆ ಒಳಪಟ್ಟಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ತೋಟಗಾರಿಕಾ ಬೆಳೆಗಳಾದ ಆಲೂಗಡ್ಡೆ, ಈರುಳ್ಳಿ, ಮೆಣಸಿನಕಾಯಿಗಳನ್ನು 22,587 ಹೆಕ್ಟೇರ ಪ್ರದೇಶದಲ್ಲಿ ಬೆಳೆಯುವ ಗುರಿ ಹೊಂದಲಾಗಿದ್ದು, ಇಲ್ಲಿಯವರೆಗೆ 800 ಹೆಕ್ಟೇರ ಪ್ರದೇಶದಲ್ಲಿ ಶೇ.3.54 ಬಿತ್ತನೆಯಾಗಿದೆ. ಮತ್ತು ಬಿತ್ತನೆ ಕಾರ್ಯ ಇನ್ನೂ ಪ್ರಗತಿಯಲ್ಲಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
08/07/2022 07:14 pm