ಧಾರವಾಡ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಕಲ್ಯಾಣಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು. ದೌರ್ಜನ್ಯಕ್ಕೊಳಗಾಗಿ ರಕ್ಷಣೆ ಕೋರಿ ಬರುವ ಸಂತ್ರಸ್ಥರ ದೂರುಗಳನ್ನು ಪೊಲೀಸರು ಆದ್ಯತೆ ಮೇಲೆ ದಾಖಲಿಸಿಕೊಂಡು ನಿಗದಿತ ಅವಧಿಯೊಳಗೆ ಆರೋಪ ಪಟ್ಟಿ ಸಲ್ಲಿಸಿ, ನ್ಯಾಯ ಒದಗಿಸಬೇಕು. 50 ಲಕ್ಷ ರೂಪಾಯಿ ಒಳಗಿನ ಎಲ್ಲ ಕಾಮಗಾರಿಗಳಲ್ಲಿ ಎಸ್.ಸಿ ಹಾಗೂ ಎಸ್.ಟಿ ಗುತ್ತಿಗೆದಾರರಿಗೆ ಮೀಸಲಾತಿಯನ್ನು ಕಡ್ಡಾಯವಾಗಿ ನೀಡಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ 2ನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ದೌರ್ಜನ್ಯಕ್ಕೀಡಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವ್ಯಕ್ತಿಗಳ ದೂರುಗಳನ್ನು ದಾಖಲಿಸಿಕೊಳ್ಳಲು ಪೊಲೀಸರು ವಿಳಂಬ ಮಾಡಬಾರದು. ಜಿಲ್ಲೆಯಲ್ಲಿ ಈವರೆಗೆ ಬಾಕಿ ಇರುವ 134 ಪ್ರಕರಣಗಳನ್ನು ತ್ವರಿತವಾಗಿ ವಿಲೇಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಸರ್ಕಾರಿ ಅಭಿಯೋಜಕರಿಗೆ ಸೂಚಿಸಿದರು.
ಲೋಕೋಪಯೋಗಿ, ಪಂಚಾಯತ ರಾಜ್ ಎಂಜಿನಿಯರಿಂಗ್ ವಿಭಾಗ, ಸಣ್ಣ ಮತ್ತು ಮಧ್ಯಮ ನೀರಾವರಿ ಹಾಗೂ ಜನಸಂಪನ್ಮೂಲ ಸೇರಿದಂತೆ ಯಾವುದೇ ಇಲಾಖೆಗಳು ಕೈಗೊಳ್ಳುವ 50 ಲಕ್ಷ ರೂಪಾಯಿ ಒಳಗಿನ ಕಾಮಗಾರಿಗಳಲ್ಲಿ ಎಸ್.ಸಿ ಹಾಗೂ ಎಸ್.ಟಿ ಗುತ್ತಿಗೆದಾರರಿಗೆ ಕಡ್ಡಾಯವಾಗಿ ನಿಯಮಾನುಸಾರ ಮೀಸಲಾತಿ ನೀಡಬೇಕು. ಸ್ಮಶಾನ ಜಾಗೆಗಳ ಕೊರತೆ ಎದುರಿಸುತ್ತಿರುವ ಜಿಲ್ಲೆಯ ಗ್ರಾಮಗಳಲ್ಲಿ ತಹಶೀಲ್ದಾರರು ಪರಿಶೀಲನೆ ನಡೆಸಿ ರುದ್ರಭೂಮಿ ಒದಗಿಸಲು ಸ್ಪಂದಿಸಬೇಕು ಎಂದು ಸೂಚಿಸಿದರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ, ಕಿಮ್ಸ್, ಡಿಮಾನ್ಸ್ ಸೇರಿದಂತೆ ಸಾರ್ವಜನಿಕ ವಲಯದ ವಿವಿಧ ಕಚೇರಿ ಹಾಗೂ ಸಂಸ್ಥೆಗಳಲ್ಲಿ ಸಫಾಯಿ ಕರ್ಮಚಾರಿಗಳಿಗೆ ಅಗತ್ಯ ಸೌಲಭ್ಯ, ವೇತನ, ಭತ್ಯೆಗಳನ್ನು ಸಕಾಲದಲ್ಲಿ ಪಾವತಿಸಬೇಕು. ಮಹಾನಗರ ಪಾಲಿಕೆಯಲ್ಲಿ ಹೊರಗುತ್ತಿಗೆ ಮೂಲಕ ಮಾನವ ಸಂಪನ್ಮೂಲ ಒದಗಿಸುತ್ತಿರುವ ಗುತ್ತಿಗೆದಾರರು ಪಾಲಿಕೆಗೆ ವಂಚನೆ ಮಾಡುತ್ತಿರುವ ಆರೋಪಗಳಿವೆ. ಪಾಲಿಕೆಯು ವಿಶೇಷ ಜಾಗೃತದಳ ರಚಿಸಿ, ವಾರ್ಡವಾರು ಪರಿಶೀಲನೆ ಕೈಗೊಂಡು ನಕಲಿ ಅಥವಾ ಸುಳ್ಳು ಮಾಹಿತಿ ಹೊಂದಿರುವವರನ್ನು ಪತ್ತೆ ಮಾಡಿ ಅಕ್ರಮ ತಡೆಯಬೇಕು. ಅವಳಿ ನಗರದ ಪಾರ್ಕಿಂಗ್ ಸ್ಥಳಗಳ ಗುತ್ತಿಗೆ ಪಡೆದಿರುವವರು ನಿಗದಿಗಿಂತ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳಿವೆ. ಯಾವುದೇ ಪ್ರಭಾವಕ್ಕೂ ಮಣಿಯದೇ ಅಂತಹ ಶಕ್ತಿಗಳ ವಿರುದ್ಧ ಕ್ರಮವಹಿಸಬೇಕು. ರೈಲ್ವೆ ಪೊಲೀಸರು ಅಲ್ಲಿನ ಸಫಾಯಿ ಕರ್ಮಚಾರಿಗಳಿಗೆ ತೊಂದರೆ ನೀಡುತ್ತಿರುವ ಬಗ್ಗೆ ಅನೇಕ ಮಾಹಿತಿಗಳಿವೆ ಸಂಬಂಧಿಸಿದವರ ವಿರುದ್ಧ ಕ್ರಮವಹಿಸಬೇಕು ಎಂದು ಹೇಳಿದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಬಿ.ಗೋಪಾಲಕೃಷ್ಣ ಮಾತನಾಡಿ, ಹೊರಗುತ್ತಿಗೆ ಪೌರಕಾರ್ಮಿಕರ ಕುರಿತು ವಲಯವಾರು ವ್ಯಕ್ತಿಗತವಾಗಿ ಪರಿಶೀಲನೆ ಕೈಗೊಳ್ಳಲಾಗುತ್ತಿದೆ. ಗುತ್ತಿಗೆದಾರರ ಸಂಬಂಧಿಕರು ಇದ್ದರೆ ಕ್ರಮವಹಿಸಲಾಗುವುದು. ರಾಷ್ಟ್ರೀಕೃತ ಬ್ಯಾಂಕವೊಂದರಲ್ಲಿ ಪೌರಕಾರ್ಮಿಕರ ಪ್ರತ್ಯೇಕ ಹೊಸ ಉಳಿತಾಯ ಖಾತೆಗಳನ್ನು ತೆರೆದು, ಬ್ಯಾಂಕ್ ಮೂಲಕ ವಿಮಾ ಸೌಲಭ್ಯ, ಎಟಿಎಂ ಕಾರ್ಡ್‍ಗಳನ್ನು ನೇರವಾಗಿ ಹೊರಗುತ್ತಿಗೆ ಕಾರ್ಮಿಕರಿಗೆ ಹಸ್ತಾಂತರಿಸಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಅಶೋಕ ದೊಡ್ಡಮನಿ ಮಾತನಾಡಿ, ಧಾರವಾಡ ತಾಲೂಕಿನ ಹಂಗರಕಿ ಗ್ರಾಮದಲ್ಲಿ ಇತ್ತೀಚೆಗೆ ಸಂಭವಿಸಿರುವ ರಾಮಪ್ಪ ಕೆಳಗಡೆ ಎಂಬ ಪರಿಶಿಷ್ಟ ಜಾತಿ ಯುವಕನ ಅಸಹಜ ಸಾವನ್ನು ಕೊಲೆ ಎಂದು ಶಂಕಿಸಲಾಗಿದೆ. ಕೊಲೆಗೆ ಕಾರಣರಾದವರೇ ತರಾತುರಿಯಲ್ಲಿ ಶವವನ್ನು ದಹನ ಮಾಡಿಸಿದ್ದಾರೆ. ಸಾಂಪ್ರದಾಯಿಕವಾಗಿ ಹೂಳುವ ಪದ್ಧತಿ ಇರುವ ಸಮಾಜದ ರೂಢಿಯನ್ನು ಕಡೆಗಣಿಸಿ ಚಿತೆ ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಸಾವಿಗೀಡಾದ ವ್ಯಕ್ತಿಯ ಕುಟುಂಬ ಅನಾಥವಾಗಿದೆ. ಸೂಕ್ತ ರಕ್ಷಣೆ, ಮಕ್ಕಳಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ನೀಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು, ಪ್ರಕರಣದಲ್ಲಿ ಮರಣೋತ್ತರವಾಗಿ ದೇಹದ ಪರೀಕ್ಷೆ ನಡೆದಿಲ್ಲ, ಶವವನ್ನು ದಹನ ಮಾಡಿರುವುದರಿಂದ ಮುಂದೆ ಕೈಗೊಳ್ಳಬೇಕಾದ ಕ್ರಮದ ಕುರಿತು ಸೂಕ್ತ ನಿರ್ದೇಶನ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಮೃತನ ಮಕ್ಕಳ ಉಚಿತ ಶಿಕ್ಷಣ ಹಾಗೂ ವಸತಿಗಾಗಿ ಕೂಡಲೇ ಅನುಕೂಲ ಕಲ್ಪಿಸಲಾಗುವುದು ಎಂದರು.
ಸಮಿತಿ ಸದಸ್ಯ ಸಿದ್ದಲಿಂಗಪ್ಪ ಕರೆಮ್ಮನವರ ಮಾತನಾಡಿ, ಕುಂದಗೋಳ ತಾಲೂಕಿನ ಪರಿಶಿಷ್ಟ ಪಂಗಡದ ಫಲಾನುಭವಿ ಒಬ್ಬರಿಗೆ ನಿಗದಿಗಿಂತ ಹೆಚ್ಚು ಆದಾಯ ಹೊಂದಿದ್ದರೂ ಕೂಡ ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮವು ಭೂ ಒಡೆತನ ಯೋಜನೆಯಡಿ ಭೂಮಿ ಮಂಜೂರಿ ಮಾಡಿದೆ ಎಂಬ ದೂರು ಈ ಹಿಂದೆ ಬಂದಿತ್ತು ಅದು ಸತ್ಯವಾಗಿಲ್ಲ. ವಾಸ್ತವವಾಗಿ ಜಮೀನು ಮಂಜೂರು ಮಾಡುವ ಸಂದರ್ಭದಲ್ಲಿ ಆ ಕುಟುಂಬದ ವಾರ್ಷಿಕ ಆದಾಯವು ನಿಗದಿಗಿಂತ ಕಡಿಮೆ ಇತ್ತು. ಅದನ್ನು ಪರಿಗಣಿಸಿ ಫಲಾನುಭವಿಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು. ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿಗಳು ಸ್ಥಳೀಯ ತಹಶೀಲ್ದಾರರು ಸ್ಥಳಕ್ಕೆ ಭೇಟಿ ನೀಡಿ ಎಲ್ಲ ದಾಖಲೆಗಳನ್ನು ಖುದ್ದಾಗಿ ಪರಿಶೀಲಿಸಿ ವರದಿ ನೀಡಲು ಸೂಚಿಸಿದರು.
ಸದಸ್ಯೆ ಇಂದುಮತಿ ಶಿರಗಾಂವ ಮಾತನಾಡಿ, ಹಳೆ ಹುಬ್ಬಳ್ಳಿಯ ಎಸ್.ಎಂ ಕೃಷ್ಣ ನಗರದ ಪರಿಶಿಷ್ಟ ಜಾತಿಯ ಮಹಿಳೆಯೊಬ್ಬರಿಗೆ ಮಂಜೂರಾಗಿರುವ ಆಶ್ರಯ ಮನೆಯಲ್ಲಿ ಅನ್ಯ ವ್ಯಕ್ತಿಯೊಬ್ಬರು ವಾಸವಾಗಿದ್ದಾರೆ. ಅವರನ್ನು ಹೊರಹಾಕಿ ಮೂಲ ಮಾಲೀಕರಿಗೆ ಹಸ್ತಾಂತರಿಸಬೇಕು ಎಂದು ಕೋರಿದರು. ಆಗ ಸ್ಪಂದಿಸಿದ ಮಹಾನಗರ ಪಾಲಿಕೆ ಆಯುಕ್ತ ಡಾ.ಬಿ. ಗೋಪಾಲಕೃಷ್ಣ ಅವರು ಸಂಬಂಧಿಸಿದವರಿಗೆ ನೋಟಿಸ್ ಜಾರಿ ಮಾಡಿ ಮೂರು ದಿನಗಳೊಳಗೆ ಮಾಲೀಕರಿಗೆ ವಹಿಸಿಕೊಡಲಾಗುವುದು ಎಂದರು.
ಅವಧಿ ಪೂರ್ಣಗೊಳಿಸಿದ ಸಮಿತಿ ಸದಸ್ಯರಾದ ಅಶೋಕ ದೊಡ್ಡಮನಿ, ಸಿದ್ದಲಿಂಗಪ್ಪ ಕರೆಮ್ಮನವರ, ಇಂದುಮತಿ ಶಿರಗಾಂವ, ಇಸಾಬೆಲ್ಲಾ ಕ್ಸೇವಿಯರ್, ಅರ್ಜುನ ವಡ್ಡರ, ಕಸ್ತೂರಿ ಹಳ್ಳದ, ಕಾಡಯ್ಯ ಹೆಬ್ಬಳ್ಳಿಮಠ, ಮಂಜುನಾಥ ಡೊಳ್ಳಿನ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಉಪಪೊಲೀಸ್ ಆಯುಕ್ತ ಗೋಪಾಲ ಬ್ಯಾಕೋಡ್, ಡಿವೈಎಸ್‍ಪಿ ಚಂದ್ರಕಾಂತ ಪೂಜಾರಿ, ಜಿಪಂ ಉಪಕಾರ್ಯದರ್ಶಿ ರೇಖಾ ಡೊಳ್ಳಿನವರ, ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ಡಾ.ಎನ್.ಆರ್.ಪುರುಷೋತ್ತಮ, ಸರ್ಕಾರಿ ಅಭಿಯೋಜಕಿ ಸರೋಜ ತಮ್ಮಿನಾಳ ಸೇರಿದಂತೆ ಜಿಲ್ಲೆಯ ತಹಶೀಲ್ದಾರರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಸಭೆಯಲ್ಲಿ ಭಾಗವಹಿಸಿದ್ದರು.
ಅಳ್ನಾವರ ಪೌರಕಾರ್ಮಿಕರ ಮನೆಗಳ ನಿರ್ಮಾಣ ಸ್ಥಳ ತನಿಖೆಗೆ ಆದೇಶ: ಅಳ್ನಾವರ ಪಟ್ಟಣ ಪಂಚಾಯತಿಯಲ್ಲಿ ನಿರ್ಮಿಸಲಾಗುತ್ತಿರುವ ಪೌರಕಾರ್ಮಿಕರ ಮನೆಗಳ ಕಾಮಗಾರಿ ಗುಣಮಟ್ಟದ ಬಗ್ಗೆ ಆರೋಪಗಳು ಬಂದಿವೆ. ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ ಅವರು ಸ್ಥಳ ತನಿಖೆ ಮಾಡಿ, ವಿಚಾರಣೆ ನಡೆಸಿ ವರದಿ ನೀಡಬೇಕು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 432 ಪೌರಕಾರ್ಮಿಕರ ಭವಿಷ್ಯನಿಧಿ (ಪಿಎಫ್) ಹಣ ಪಾವತಿಯು ಆಧಾರ್ ಸೀಡಿಂಗ್ ಕಾರಣದಿಂದ ವಿಳಂಬವಾಗಿದೆ. ಒಂದು ವಾರದೊಳಗೆ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚಿಸಿದರು.
Kshetra Samachara
28/06/2022 06:45 pm