ಧಾರವಾಡ: ಒಂದು ಗ್ರಾಮ ಅಭಿವೃದ್ಧಿ ಆಗಬೇಕಾದರೆ, ಆ ಗ್ರಾಮದ ಗ್ರಾಮಸ್ಥರ ಬೆಂಬಲ ಅತೀ ಅವಶ್ಯಕವಾಗಿರುತ್ತದೆ. ಗ್ರಾಮದ ಅಭಿವೃದ್ಧಿಗೆ ಸಹಕಾರದ ಫಲವಾಗಿ ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮ ಸಮಗ್ರ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿದೆ ಎಂದು ಶಾಸಕ ಅಮೃತ ದೇಸಾಯಿ ಹೇಳಿದರು.
ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಸೋಮವಾರ ನಡೆದ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರಡಿಗುಡ್ಡ ಗ್ರಾಮಸ್ಥರ ಬೇಡಿಕೆಯಾಗಿದ್ದ ಮಲ್ಲಿಕಾರ್ಜುನ ದೇವಸ್ಥಾನದ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಕೊಟ್ಟ ಭರವಸೆಯಂತೆ ಈಡೇರಿಸಿದ್ದೇನೆ. ಬರುವ ಕಾರ್ತಿಕ ಮಾಸದೊಳಗೆ ಮಲ್ಲಿಕಾರ್ಜುನ ಅಜ್ಜನ ಜಾತ್ರೆಯನ್ನು ಗ್ರಾಮಸ್ಥರ ಆಶಯದಂತೆ ಭರ್ಜರಿಯಾಗಿ ಆಚರಿಸೋಣ ಎಂದು ಹೇಳಿದರು.
ಕರಡಿಗುಡ್ಡ ಗ್ರಾಮಸ್ಥರು ಗ್ರಾಮದ ಅಭಿವೃದ್ಧಿಗಾಗಿ ಪಕ್ಷ ಬೇಧ ಮರೆತು ಒಂದಾಗುತ್ತಿರುವುದು ಖುಷಿಯ ಸಂಗತಿ.
ಕರಡಿಗುಡ್ಡ ಗ್ರಾಮದಲ್ಲಿ ಈಗಾಗಲೇ ರಸ್ತೆ, ಶಾಲೆ, ದೇವಸ್ಥಾನ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಯನ್ನು ಮಾಡಲಾಗಿದೆ. ಗ್ರಾಮದ ಆಶಯದಂತೆ ಈಗಾಗಲೇ ಪಿಯು ಕಾಲೇಜು ತಂದಿದ್ದೇನೆ. ಈಗ ಡಿಗ್ರಿ ಕಾಲೇಜು ಸಹ ಬಂದಿರುವುದು ಖುಷಿಯ ಸಂಗತಿ. ನಿಮ್ಮ ಸಹಕಾರ ಮತ್ತು ಬೆಂಬಲ ಇರಲಿ ಎಂದು ಮನವಿ ಮಾಡಿದರು.
ಸಾನಿಧ್ಯ ವಹಿಸಿದ್ದ ಶಂಕರಾನಂದ ಸ್ವಾಮೀಜಿ ಮಾತನಾಡಿ, ಅಮೃತ ದೇಸಾಯಿಯವರು ಶಾಸಕರಾಗಿ ಬಂದ ನಂತರ ಗ್ರಾಮದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದಾರೆ. ಅವರು ಕರಡಿಗುಡ್ಡ ಗ್ರಾಮದ ಬಗ್ಗೆ ವಿಶೇಷ ಪ್ರೀತಿಯನ್ನು ಹೊಂದಿದ್ದಾರೆ. ಇದೇ ರೀತಿ ಅವರು ಮತ್ತಷ್ಟು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲಿ ಎಂದು ಶುಭ ಹಾರೈಸಿದರು.
ಇದೇ ವೇಳೆ ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಪರಿಹಾರದ ಚೆಕ್ಕನ್ನು ಶಾಸಕರು ಹಸ್ತಾಂತರಿಸಿದರು. ನಂತರ ಕರಡಿಗುಡ್ಡದ ಕರ್ನಾಟಕ ಪಬ್ಲಿಕ್ ಸ್ಕೂಲ್ ನ 2021-22ನೇ ಸಾಲಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.
ಸಮಾರಂಭದಲ್ಲಿ ಕೆಎಂಎಫ್ ಅಧ್ಯಕ್ಷರಾದ ಶಂಕರ ಮುಗದ, ತಹಶೀಲ್ದಾರ ಸಂತೋಷ ಹಿರೇಮಠ,
ಗ್ರಾಪಂ ಅಧ್ಯಕ್ಷರಾದ ಸುವರ್ಣಾ ಕಬ್ಬೂರ, ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜ ಹೊಸೂರು, ಸಂತೋಷಗೌಡ ಪಾಟೀಲ, ಮಲ್ಲಿಕಾರ್ಜುನ ಕೆಂಪಬಸಣ್ಣವರ, ಬಸವರಾಜ ಗುತ್ತೆಪ್ಪನವರ, ನೀಲಪ್ಪ ಮಂಗಳಗಟ್ಟಿ, ಬಿಇಒ ಉಮೇಶ ಬೊಮ್ಮಕ್ಕನವರ, ಪ್ರಾಚಾರ್ಯ ನಂದೀಶ ಕಾಖಂಡಕಿ, ಪಿ.ಎಸ್.ಅಂಕಲಿ, ಸದಸ್ಯರು ಸೇರಿದಂತೆ ಗ್ರಾಮಸ್ಥರು ಇದ್ದರು.
ಕರಡಿಗುಡ್ಡ ಗ್ರಾಮದಲ್ಲಿ ಅಂದಾಜು 90 ಲಕ್ಷ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕರು ಈ ವೇಳೆ ಭೂಮಿ ಪೂಜೆ ನೆರವೇರಿಸಿದರು.
Kshetra Samachara
27/06/2022 09:14 pm