ಧಾರವಾಡ: ಮಳೆಗಾಲ ಆರಂಭವಾಗುತ್ತಿರುವುದರಿಂದ ಡೆಂಘಿ, ಚಿಕೂನ್‍ಗುನ್ಯ ಹಾಗೂ ಕೀಟ ಜನ್ಯ ರೋಗಗಳ ನಿಯಂತ್ರಣ ಕುರಿತು ಆರೋಗ್ಯ ಇಲಾಖೆಯು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಮುಂಜಾಗೃತವಾಗಿ ಸೂಕ್ತ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಸಂಬಂಧಿತ ಇಲಾಖೆಗಳು ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ ಅವರು ತಿಳಿಸಿದರು.
ಅವರು ಇಂದು ಸಂಜೆ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಜರುಗಿದ ಜಿಲ್ಲಾಮಟ್ಟದ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೋಗವಾಹಕ ಆಶ್ರಿತ ರೋಗಗಳಾದ ಮಲೇರಿಯಾ, ಡೆಂಘಿ, ಚಿಕೂನ್ ಗುನ್ಯ, ಮೆದುಳಜ್ವರ ಮತ್ತು ಇತರೆ ಸಾಂಕ್ರಾಮಿಕ ರೋಗಗಳ ನಿಯಂತ್ರಣದಲ್ಲಿ ವಿವಿಧ ಇಲಾಖೆಗಳ ಪಾತ್ರ ಬಹುಮುಖ್ಯವಾಗಿದೆ.
ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಗುಂಡಿಗಳು, ತಗ್ಗುಗಳನ್ನು ಮುಚ್ಚಿಸುವುದರ ಮೂಲಕ ನೀರು ಸಂಗ್ರಹವಾಗದಂತೆ ಮುನ್ನೆಚ್ಚರಿಕೆವಹಿಸಬೇಕು. ಗ್ರಾಮ ಪಂಚಾಯತಿಗಳು ಸೊಳ್ಳೆ ಉತ್ಪತ್ತಿ ತಾಣಗಳ ನಿವಾರಣೆ ಹಾಗೂ ಗ್ರಾಮ ನೈರ್ಮಲ್ಯ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಅವರು ಹೇಳಿದರು.
ನಗರ, ಪಟ್ಟಣ ಪ್ರದೇಶಗಳಲ್ಲಿ ಸುರಕ್ಷಿತ ನೀರು ಸರಬರಾಜು, ಚರಂಡಿ ಸ್ವಚ್ಚತೆ, ನೀರು ಸಂಗ್ರಹವಾಗದಂತೆ ಜಾಗೃತಿವಹಿಸಬೇಕು. ರಸ್ತೆ ಬದಿಯಲ್ಲಿ ತೆರೆದ ವಾತಾವರಣದಲ್ಲಿ ಕತ್ತರಿಸಿದ ಹಣ್ಣುಗಳ ಮಾರಾಟವನ್ನು ನಿಷೇಧಿಸಲು ಮತ್ತು ಹೋಟೆಲ್‍ಗಳಲ್ಲಿ ಸ್ವಚ್ಚತೆ, ನೈರ್ಮಲ್ಯತೆ ಕಾಪಾಡುವಂತೆ ನಗರ ಸ್ಥಳೀಯ ಸಂಸ್ಥೆಯ ಮುಖ್ಯಸ್ಥರು ಕಾನೂನು ರೀತಿ ಕ್ರಮವಹಿಸಬೇಕು. ನೀರು ಸರಬರಾಜು ಪೈಪ್ ಗಳನ್ನು ಆಗಿಂದಾಗ್ಗೆ ಪರೀಕ್ಷಿಸುವುದರೊಂದಿಗೆ ಸೋರಿಕೆಯನ್ನು ತಡೆಗಟ್ಟಬೇಕೆಂದು ಸಿಇಓ ಡಾ.ಇಟ್ನಾಳ ಅವರು ಸೂಚಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಗಳಲ್ಲಿ ಮತ್ತು ಅವರ ಪಾಲಕರಲ್ಲಿ ಸೊಳ್ಳೆಗಳಿಂದ ಹರಡುವ ಮತ್ತು ಇತರೆ ಸಾಂಕ್ರಾಮಿಕ ರೋಗಗಳ ಮತ್ತು ಅವುಗಳ ನಿಯಂತ್ರಣದ ಬಗ್ಗೆ ತಿಳುವಳಿಕೆ ಮೂಡಿಸಬೇಕು. ಪಠ್ಯಕ್ರಮದಲ್ಲಿ ಈ ವಿಷಯಗಳನ್ನು ಅಳವಡಿಸಿ, ಬೋಧಿಸಬೇಕು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿಗಳು ವೈಯಕ್ತಿಕ ಆರೋಗ್ಯ ರಕ್ಷಣೆ ಮತ್ತು ಪರಿಸರ ನೈರ್ಮಲ್ಯತೆ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು. ಸೊಳ್ಳೆ ರಹಿತ ಓವರ್ ಹೆಡ್‍ಟ್ಯಾಂಕ್ ಹಾಗೂ ಅಂಡರ್‌ಗ್ರೌಂಡ್ ಟ್ಯಾಂಕ್ ಗಳನ್ನು ನಿರ್ಮಿಸುವಂತೆ ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸಬೇಕು. ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿದ್ಯಾರ್ಥಿ ವಸತಿನಿಲಯಗಳನ್ನು ಹೊಂದಿರುವ ಮತ್ತು ನಿರ್ವಹಿಸುತ್ತಿರುವ ಇಲಾಖೆಗಳು ವಸತಿನಿಲಯಗಳಲ್ಲಿ ಸೊಳ್ಳೆ ನಿರೋಧಕ ಜಾಲರಿಗಳನ್ನು ಅಳವಡಿಸಬೇಕು. ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು. ಮತ್ತು ಹಾಸ್ಟಲ್ ಆವರಣಗಳಲ್ಲಿ ಪರಿಸರ ನೈರ್ಮಲ್ಯ ಕಾಪಾಡುವಂತೆ ನಿರ್ದೇಶಿಸಿದರು.
ಮೀನುಗಾರಿಕೆ ಇಲಾಖೆ, ಕೈಗಾರಿಕೆ ಇಲಾಖೆ, ನೀರಾವರಿ ಇಲಾಖೆ, ಕಂದಾಯ ಇಲಾಖೆ, ಪಶುಸಂಗೋಪನೆ ಇಲಾಖೆ, ಗಣಿ ಮತ್ತು ಭೂ ಗರ್ಭ ವಿಜ್ಞಾನ ಇಲಾಖೆ, ಕೆಎಸ್ ಆರ್‍ಟಿಸಿ, ಅರಣ್ಯ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಇಲಾಖೆಗಳು ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮತ್ತು ಸಾಂಕ್ರಾಮಿಕ ರೋಗಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ, ಸೂಕ್ತ ಕ್ರಿಯಾಯೋಜನೆಯೊಂದಿಗೆ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕೆಂದು ಜಿಲ್ಲಾ ಪಂಚಾಯತ ಸಿಇಓ ಡಾ.ಸುರೇಶ ಇಟ್ನಾಳ ಅವರು ತಿಳಿಸಿದರು.
Kshetra Samachara
17/05/2022 07:10 pm