ಧಾರವಾಡ: ಶಾಂತಿ ಸ್ವರೂಪ ಮೂರ್ತಿಯಾದ ಭಗವಾನ ಮಹಾವೀರರ ಅಹಿಂಸಾ ತತ್ವಗಳನ್ನು ಪಾಲಿಸಿದರೆ, ಒಳ್ಳೆಯ ಸಮಾಜ ನಿರ್ಮಾಣ ಸಾಧ್ಯ ಎಂದು ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷೆ ಸವಿತಾ ಅಮರಶೆಟ್ಟಿ ಹೇಳಿದರು.
ಧಾರವಾಡ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿಂದು ನಗರದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಭಾಭವನದಲ್ಲಿ ಏರ್ಪಡಿಸಲಾಗಿದ್ದ ಭಗವಾನ ಮಹಾವೀರರ 2631 ನೇ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮಲ್ಲಿರುವ ದುರ್ಗುಣಗಳನ್ನು ದೂರವಿಡಲು ಸಂತರ ಸಾಗಂತ್ಯ ಬೇಕು. ಇಂದಿನ ದಿನಮಾನಗಳಲ್ಲಿ ಸಂತ್ಸಂಗಗಳು ಅವಶ್ಯ. ಮಹಾವೀರರ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಂಡು ಸಾಗಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗದೇ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ 105 ಧರ್ಮಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿ ಅವರು ಮಾತನಾಡಿ, ಭಗವಾನ ಮಹಾವೀರರು ತಮ್ಮ ಆತ್ಮವನ್ನು ಕಲ್ಯಾಣ ಮಾಡಿಕೊಳ್ಳುವುದರೊಂದಿಗೆ ಸಮಾಜದ ಜನರ ಕಲ್ಯಾಣವನ್ನು ಮಾಡಿದ್ದಾರೆ. ಮೋಕ್ಷವನ್ನು ಹೊಂದಿ, ತತ್ವಗಳನ್ನು ತಿಳಿದು ಇನ್ನೊಬ್ಬರಿಗೆ ಕೂಡ ಅವುಗಳ ಮಹತ್ವ ಸಾರಿದರು. ಅವರ ಐದು ತತ್ವಗಳನ್ನು ಅಳವಡಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ. ಆಧುನಿಕತೆ ಭರದಲ್ಲಿ ಯುವ ಸಮೂಹ ದಾರಿ ತಪ್ಪ ಬಾರದು. ಎಲ್ಲ ತಂದೆ-ತಾಯಿಯರು ತಮ್ಮ ಮಕ್ಕಳಿಗೆ ಸಂಸ್ಕಾರ ನೀಡುವುದು ಅವಶ್ಯಕವಾಗಿದೆ ಎಂದರು.
ನೇಮಿನಾಥ ದಿಬ್ಬದ ಅವರು ಭಗವಾನ ಮಾಹಾವೀರ ಜೀವನ ಮತ್ತು ಸಂದೇಶ ಕುರಿತು ವಿಶೇಷ ಉಪನ್ಯಾಸ ನೀಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಆರ್.ಎಸ್. ವರೂರ, ಡಾ.ಜಿನದತ್ತ ಹಡಗಲಿ, ಡಾ.ರಾಯಪ್ಪ ಅಪ್ಪ ಬಾಳಿಕಾಯಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
Kshetra Samachara
14/04/2022 10:01 pm