ಧಾರವಾಡ: ಚರ್ಚೆ, ಚಿಂತನೆ ನಡೆಯದೇ, ಯಾವುದೇ ಸಾಹಿತ್ಯ ರಚನೆಯಾಗಲು ಸಾಧ್ಯವಿಲ್ಲ. ಕನ್ನಡ ಸಾಹಿತ್ಯಕ್ಕೆ ಸಂಘಟನೆ, ಗುಂಪುಗಳ ಅಗತ್ಯವಿದೆ. ಅಂದಾಗ ಮಾತ್ರ ಸಾಹಿತ್ಯ ಮತ್ತಷ್ಟು ಶ್ರೀಮಂತಗೊಳ್ಳಲು ಸಾಧ್ಯ ಎಂದು ವಿದ್ವಾಂಸ ಡಾ. ಗುರಲಿಂಗ ಕಾಪಸೆ ತಿಳಿಸಿದರು.
ಧಾರವಾಡದ ಕನ್ನಡ ಸಾಹಿತ್ಯ ಪರಿಷತ್ ಸಭಾ ಭವನದ ಆವರಣದಲ್ಲಿ ಶನಿವಾರ ಆರಂಭಗೊಂಡ ಧಾರವಾಡ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾಹಿತ್ಯದ ಬೆಳವಣಿಗೆಗೆ ತಾತ್ವಿಕ ಹಿನ್ನೆಲೆ ಅತೀ ಅವಶ್ಯವಾಗಿದೆ. ತಾತ್ವಿಕ ಹಿನ್ನಲೆ ಇಲ್ಲದೇ ಯಾವುದೇ ಒಂದು ಸಾಹಿತ್ಯ ಬೆಳೆಯಲು ಸಾಧ್ಯವಿಲ್ಲ ಎಂದರು.
ಭಾರತದ ಸಾಹಿತ್ಯದಲ್ಲಿ ಕನ್ನಡ ಸಾಹಿತ್ಯಕ್ಕೆ ಶ್ರೇಷ್ಠವಾದ ಸ್ಥಾನವಿದೆ. ಮೊದಲಿನಿಂದಲೂ ಕನ್ನಡ ಸಾಹಿತಿಗಳು ಅಧ್ಯಯನ ಮತ್ತು ಚಿಂಚನಶೀಲ ಉಳ್ಳವರು. ಕನ್ನಡದ ಋಷಿ ಬಿಎಂಶ್ರೀ ಅವರು ಅಲಂಕಾರ, ಛಂದಸ್ಸು, ವ್ಯಾಕರಣ ಸೇರಿದಂತೆ ಕನ್ನಡ ಸಾಹಿತ್ಯಕ್ಕೆ ಬೇಕಾದ ಹಿನ್ನಲೆ ಒದಗಿಸಿದ್ದಾರೆ. ಸಮ್ಮೇಳನಗಳು ಹೊಸ ಸಾಹಿತಿಗಳ ಹುಟ್ಟು, ಬೆಳವಣಿಗೆ ಜೊತೆಗೆ ಸಾಹಿತ್ಯ ರಚನೆಗೆ ನಾಂದಿ ಹಾಡಬೇಕು ಎಂದು ಹೇಳಿದರು.
ಇಂದು ಉಕ್ರೇನ್ ಹಾಗೂ ರಷ್ಯಾ ಮಧ್ಯದ ಯುದ್ಧ ಜಗತ್ತಿಗೆ ನಡಕು ಹುಟ್ಟಿಸಿದೆ. ನಾಗರಿಕತೆ ಬೆಳೆದಂತೆಲ್ಲ, ಬಾನಂಗಳದಿಂದ ಬಾಂಬ್‌ಗಳ ಸುರಿಮಳೆ ಬೀಳುತ್ತಿವೆ. ಪ್ರೀತಿ ಮತ್ತು ಸೌಹಾರ್ಧತೆ ಇಲ್ಲದ ಕಾರಣಕ್ಕೆ ಇಂಥ ಅಮಾನವೀಯ ಕೃತ್ಯಗಳು ನಡೆಯುತ್ತಿದೆ. ಪ್ರೀತಿ-ಸೌಹಾರ್ಧತೆಯಿಂದ ಮಾತ್ರವೇ ವಿಶ್ವದ ಶಾಂತಿ ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲ ರಾಷ್ಟ್ರಗಳು ಚಿಂತನೆ ನಡೆಸಬೇಕಿದೆ ಎಂದರು.
ಸಮ್ಮೇಳನದ ಆಶಯ ಭಾಷಣ ಮಾಡಿದ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಮಾತನಾಡಿ, ಜಗತ್ತನ್ನೇ ನಡುಗಿಸಿದ ಕೋವಿಡ್ ಮನುಕುಲಕ್ಕೆ ಶಾಪವಾದರೂ, ಸಾಹಿತಿಗಳ ಪಾಲಿಗೆ ವರವಾಗಿ ಪರಣಿಮಿಸಿತು. ಕೋವಿಡ್ ಸಂದರ್ಭದಲ್ಲಿ ಅನೇಕ ಸಾಹಿತಿಗಳು ಸಾಹಿತ್ಯ ಕೃಷಿಯಲ್ಲಿ ಸಾಧನೆ ಮಾಡುವಂತಾಗಿದೆ. ಎರಡೂವರೆ ವರ್ಷದಲ್ಲಿ ನಾನು ಸುಮಾರು ಆರು ಪುಸ್ತಕ ಬರೆದಿದ್ದು, ನಾಲ್ಕು ಪುಸ್ತಕ ಪ್ರಕಟಗೊಂಡಿವೆ ಎಂದರು.
ಸಂವಿಧಾನವನ್ನು ಪ್ರತಿಯೊಬ್ಬ ಸಾಮಾನ್ಯರು ಕೂಡಾ ಓದಬೇಕು. ಕುರಾನ್, ಭಗವದ್ಗೀತೆಯಂತೆ ಸಂವಿಧಾನ ಪುಸ್ತಕ ಮನೆಯಲ್ಲಿ ಇಡಬೇಕು ಎಂದರು.
ಕಾನೂನು, ವಿಜ್ಞಾನ, ವಾಣಿಜ್ಯ ಇತ್ಯಾದಿ ವಿಷಯಗಳನ್ನು ಕನ್ನಡದಲ್ಲಿ ಓದುಗರಿಗೆ ಕಟ್ಟಿಕೊಡಬೇಕಿದೆ. ವಿಶ್ವವಿದ್ಯಾಲಯಗಳು ಪದವಿ ಕೊಡುವ ನಿಷ್ಪ್ರಯೋಜಕ ಸಂಸ್ಥೆಗಳು ಎನ್ನುವ ಅಪಖ್ಯಾತಿಯಿಂದ ಮುಕ್ತಿ ಪಡೆಯಬೇಕಿದೆ. ಕನ್ನಡ ಚಿನ್ನದ ಭಾಷೆ ಆಗದಿದ್ದರೂ, ಅನ್ನದ ಭಾಷೆ ಆಗಲಿ ಎಂದು ಸಮ್ಮೇಳನಕ್ಕೆ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಧಾರವಾಡ ಸಾಹಿತ್ಯ ಪರಿಷತ್ ರಾಜ್ಯಕ್ಕೆ ಮಾದರಿಯಾಗಿದೆ. ಧಾರವಾಡದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ರಂಗಮಂದಿರ ಇಲ್ಲದಿರುವುದು ಕಳವಳಕಾರಿ ಸಂಗತಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಗಮನಕ್ಕೆ ತಂದು ಆದಷ್ಟು ಬೇಗನೆ 75 ಲಕ್ಷ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು.
ಕನ್ನಡ ಕಟ್ಟಿ ಬೆಳೆಸುವಲ್ಲಿ ಧಾರವಾಡದ ಪಾತ್ರ ಪ್ರಮುಖವಾಗಿದೆ. ಧಾರವಾಡವು ಗೋಕಾಕ್ ಚಳವಳಿಗೆ ನಾಂದಿ ಹಾಡಿದೆ. ಅದರಲ್ಲಿ ತಾವು ಕೂಡಾ ಸಾಕಷ್ಟು ಓಡಾಡಿದ್ದೇವೆ. ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ, ಧಾರವಾಡದಲ್ಲಿ ಮಾತ್ರ ಕನ್ನಡ ಭಾಷೆ ಜೀವಂತ ಉಳಿದಿದೆ. ಅಚ್ಚಗನ್ನಡ ಭಾಷೆಯ ಉಳಿವಿಗೆ ಧಾರವಾಡ, ಗದಗ, ಹಾವೇರಿ ಸೇರಿದಂತೆ ಉತ್ತರ ಕರ್ನಾಟಕ ಪಾತ್ರವು ಹಿರಿದಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಆಚಾರ್ ಹಾಲಪ್ಪ ಮಾತನಾಡಿ, 60-70ರ ದಶಕದ ಕಲಾಘಟ್ಟದಲ್ಲಿ ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಧಾರವಾಡದ ಕಡೆಗೆ ಮುಖ ಮಾಡುತ್ತಿದ್ದರು. ಸುಂದರ ಮಲೆನಾಡಿನ ಅಂಚಿನಲ್ಲಿ ಇರುವ ಧಾರವಾಡದಲ್ಲಿ ಅಂದು ಬಿಳುವ ಮಳೆ, ಇಂದು ಕಣ್ಮರೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ದಕ್ಷಿಣ ಕರ್ನಾಟಕದವರು ಸರಕಾರಿ ಹಾಗೂ ಶಿಕ್ಷಣದ ಸೌಲಭ್ಯಗಳು ಪಡೆಯಲು ಮುಂದಿದ್ದಾರೆ. ಉತ್ತರ ಕರ್ನಾಟಕದವರು ಯಾವುದೇ ಸೌಲಭ್ಯ ಪಡೆಯದೆ ಹಿಂದುಳಿದ್ದಾರೆ. ಇದರಿಂದ ಮಕ್ಕಳಿಗೆ ಪೂರ್ಣ ಪ್ರಮಾಣದ ವಿದ್ಯೆ ಕೊಡಲು ಇಂದೂ ಸಾಧ್ಯವಾಗಿಲ್ಲ. ಈ ಕೊರತೆ ನೀಗಿಸಲು ಸರಕಾರ ಧಾರವಾಡಕ್ಕೆ ಅನೇಕ ಶೈಕ್ಷಣಿಕ ಕೊಡುಗೆ ನೀಡಿದೆ ಎಂದರು.
ಜವಳಿ-ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಧಾರವಾಡ ಜಿಲ್ಲೆಯು ಅನೇಕ ಸಾಹಿತ್ಯ, ಸಂಗೀತಗಾರರಿಗೆ ಜನ್ಮ ನೀಡಿದ ತಪೋಭೂಮಿ. ಇವರೆಲ್ಲ ಕನ್ನಡಕ್ಕೆ ನೀಡಿದ ಕೊಡುಗೆ ಅಮೋಘವಾಗಿದೆ. ಇವರೆಲ್ಲರ ಸಾಹಿತ್ಯದ ಮಜಲುಗಳನ್ನು ಭವಿಷ್ಯದ ಪೀಳಿಗೆಗೆ ತಿಳಿಸಿ ಕೊಡುವ ಕಾರ್ಯ ನಡೆಯಬೇಕು ಎಂದರು.
ವಿಪ ಸದಸ್ಯ ಎಸ್.ವಿ.ಸಂಕನೂರ,
ರಾಜ್ಯದಲ್ಲಿ ಕನ್ನಡ ಶಾಲೆಗಳ ಸ್ಥಿತಿಗತಿ ಅತ್ಯಂತ ಶೋಚನೀಯ ಸ್ಥಿತಿಯಲ್ಲಿವೆ. ಪ್ರಸಕ್ತ ವರ್ಷದಲ್ಲಿ 279 ಶಾಲೆಗಳಲ್ಲಿ ಪ್ರವೇಶ ಶೂನ್ಯವಾಗಿದೆ. 896 ಶಾಲೆಗಳಲ್ಲಿ 5 ವಿದ್ಯಾರ್ಥಿಗಳು, 3261 ಶಾಲೆಗಳಲ್ಲಿ 10 ವಿದ್ಯಾರ್ಥಿಗಳು 10,337 ಶಾಲೆಗಳಲ್ಲಿ 20 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದಾರೆ ಎಂದು ವಿಷಾದಿಸಿದರು.
ಕರ್ನಾಟಕ ಏಕೀಕರಣ ಹಾಗೂ ಗೋಕಾಕ್ ಚಳವಳಿಗೆ ಸ್ಫೂರ್ತಿ ನೀಡಿದ ಸ್ಥಳ ಧಾರವಾಡ. ಅಲ್ಲದೇ, ಸಾಹಿತ್ಯ, ಸಂಗೀತ, ಸಂಸ್ಕೃತಿಗೆ ಮಹತ್ವದ ಕೊಡುಗೆ ನೀಡಿದೆ. ಕನ್ನಡದ ಬಗ್ಗೆ ಕನ್ನಡಿಗರಸದ ನಮಗೆ ಮೊದಲು ಅಭಿಮಾನ ಮೂಡಬೇಕು ಎಂದರು.
ಸಮ್ಮೇಳನಾಧ್ಯಕ್ಷ ಡಾ.ರಮಾಕಾಂತ ಜೋಶಿ, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಕಸಾಪ ಹಾವೇರಿ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಕವಿಸಂ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಕೆಎಂಎಫ್ ಅಧ್ಯಕ್ಷ ಶಂಕರ ಮುಗದ, ವಿಪ ಮಾಜಿ ಸಭಾಪತಿ ಡಾ. ವೀರಣ್ಣ ಮತ್ತಿಕಟ್ಟಿ, ಡಾ. ಶರಣಪ್ಪ ಕೊಟಗಿ ಇದ್ದರು.
ಸಮಾರಂಭದಲ್ಲಿ ನಿಕಟಪೂರ್ವ ಸಮ್ಮೇಳಾನಾಧ್ಯಕ್ಷ ಡಾ. ಬಸವರಾಜ ಸಾದರ ಅವರು 14 ನೇ ಸಮ್ಮೇಳನಾಧ್ಯಕ್ಷ ಡಾ. ರಮಾಕಾಂತ ಜೋಶಿ ಅವರಿಗೆ ಕನ್ನಡದ ಧ್ವಜವನ್ನು ಹಸ್ತಾಂತರಿಸಿದರು.
Kshetra Samachara
26/03/2022 10:03 pm