ಧಾರವಾಡ: ವಿಶ್ವದ ಅನೇಕ ರಾಷ್ಟ್ರಗಳನ್ನು ಗಮನಿಸಿದಾಗ ಭಾರತದಲ್ಲಿ ಅತೀ ಹೆಚ್ವು ಗ್ರಾಹಕರು ಇದ್ದಾರೆ. ವಿಶ್ವದ ಅನೇಕ ಅಂತರಾಷ್ಟ್ರೀಯ ಕಂಪೆನಿಗಳು ಭಾರತದಲ್ಲಿ ಮಾರಾಟ, ವ್ಯವಹಾರ ಮಾಡುತ್ತಿವೆ. ದೇಶದಲ್ಲಿ ಪ್ರತಿ ವರ್ಷ ಸುಮಾರು 235 ಲಕ್ಷ ಕೋಟಿ ರೂಪಾಯಿಗಳ ವ್ಯಹಾರವಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಹೇಳಿದರು.
ಜಿಲ್ಲಾಡಳಿತ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಯೋಗದಲ್ಲಿ ಹುರಕಡ್ಲಿ ಅಜ್ಜ ಕಾನೂನು ಮಾಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸಕ್ತ ಸಾಲಿನ ವಿಶ್ವ ಗ್ರಾಹಕರ ದಿನಾಚರಣೆಯನ್ನು “ನ್ಯಾಯೋಚಿತ ಡಿಜಿಟಲ್ ಹಣಕಾಸು” ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಅನೇಕರು ವಿವಿಧ ಕಂಪನಿ, ಬ್ಯಾಂಕ್ ಮತ್ತು ಇತರ ಸೇವೆಗಳ ಹೆಸರಿನಲ್ಲಿ ಮೊಬೈಲ್ ಕರೆ, ಎಸ್.ಎಂ.ಎಸ್. ಸಂದೇಶ, ವಾಯ್ಸ್ ಮೇಸೆಜ್‍ಗಳ ಮೂಲಕ ಗ್ರಾಹಕರಿಗೆ ಆಮಿಷಗಳನ್ನು ಒಡ್ಡಿ ಸುಲಭವಾಗಿ ಮೋಸ ಮಾಡುತ್ತಾರೆ. ಆದ್ದರಿಂದ ಡಿಜಿಟಲ್ ಹಣಕಾಸು ವ್ಯವಹಾರದ ಬಗ್ಗೆ ಪ್ರತಿಗ್ರಾಹಕನಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ವಿವಿಧ ಇಲಾಖೆಗಳು ಹಾಗೂ ಆರ್ಥಿಕ ಸಂಸ್ಥೆಗಳು ಹಮ್ಮಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಆನ್‍ಲೈನ್, ಡಿಜಿಟಲ್ ಮತ್ತು ವಿವಿಧ ರೀತಿಯ ಆಫರ್‌ಗಳ ವ್ಯವಹಾರದ ಸಂದರ್ಭದಲ್ಲಿ ಗ್ರಾಹಕರಲ್ಲಿ ಹೆಚ್ಚು ಜಾಗೃತಿ ಮುಖ್ಯವಾಗಿದೆ. ಇಂದು ಗ್ರಾಹಕ ಆಯೋಗ ಅಸ್ತಿತ್ವದಲ್ಲಿರುವದರಿಂದ ಅನೇಕರು ಸರಕು, ಸೇವೆಗಳ ವ್ಯತ್ಯಯ ಕುರಿತು ದೂರು ಸಲ್ಲಿಸುತ್ತಿದ್ದಾರೆ.
ಅನೇಕ ಕಂಪೆನಿಗಳು ತಪ್ಪು ಮಾಹಿತಿ, ನ್ಯೂನ್ಯತೆ ಇರುವ ಸರಕು ಸಾಮಾನು ನೀಡಿ ಗ್ರಾಹಕರಿಗೆ ಮೋಸ ಮಾಡುವ ಸಾಧ್ಯತೆ ಇರುತ್ತದೆ. ಎಂ.ಆರ್.ಪಿ ಗಿಂತ ಹೆಚ್ಚು ದರ ವಸೂಲು ಮಾಡುವುದು ಅಪರಾಧ. ಈ ಕುರಿತು ಸಂಬಂದಿಸಿದ ಅಧಿಕಾರಿಗಳು, ಗ್ರಾಹಕರು ಎಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದರು.
ಗ್ರಾಹಕರು ತಮ್ಮ ಹಕ್ಕು ಪಡೆಯಲು ಅರಿವು ಹೊಂದಬೇಕು. ಡಿಜಿಟಲ್ ವ್ಯವಹಾರ ಮಾಡುವಾಗ ಅತೀ ಜಾಗೃತಿ ವಹಿಸಬೇಕು. ಸುಳ್ಳು ಸಂದೇಶಗಳನ್ನು ನಂಬಿ ಅನೇಕರು ತಮ್ಮ ಬ್ಯಾಂಕ್ ಮಾಹಿತಿ, ಓಟಿಪಿ ಸಂಖ್ಯೆ ಹಂಚಿಕೊಳ್ಳುತ್ತಾರೆ. ಇದರಿಂದ ಅವರು ಸುಲಭವಾಗಿ ವಂಚಕರ ಮೋಸಕ್ಕೆ ಒಳಗಾಗುತ್ತಾರೆ. ಇದರಿಂದಾಗ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ ಎಂದು ಜಿಲ್ಲಾಧಿಕಾರಿಗಳು ಕಳವಳ ವ್ಯಕ್ತಪಡಿಸಿದರು.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ ಜಂಟಿಯಾಗಿ ವಿವಿಧ ಅಂಗಡಿ, ಮಾಲ್‍ಗಳ ಮೇಲೆ ಅನಿರೀಕ್ಷಿತ ದಾಳಿ ಮಾಡಿ, ಗ್ರಾಹಕರಿಗೆ ನೀಡುವ ಸೇವೆಗಳು ಕಾನೂನು ಮತ್ತು ನ್ಯಾಯಬದ್ಧವಾಗಿ ಇರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕೆಂದು ಅವರು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಈಶಪ್ಪ ಕೆ ಭೂತೆ ಅವರು ಮಾತನಾಡಿ, ವಿಶ್ವ ಗ್ರಾಹಕ ದಿನಾಚರಣೆ ಮೂಲಕ ಗ್ರಾಹಕರ ಹಕ್ಕುಗಳ ಮತ್ತು ಕಾನೂನುಗಳ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಗ್ರಾಹಕರಿಗೆ ನೀಡುವ ಸೇವೆ, ಸರಕುಗಳಲ್ಲಿ ನ್ಯೂನ್ಯತೆ, ವ್ಯತ್ಯಯ ಉಂಟಾದರೆ ಗ್ರಾಹಕರು ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ಬಳಿ ದೂರು ಸಲ್ಲಿಸಬಹುದು. ಗ್ರಾಹಕರ ಹಕ್ಕುಗಳ ಕುರಿತು ಜಾಗೃತಿಯನ್ನು ಆಂದೋಲನ ರೀತಿಯಲ್ಲಿ ಬೆಳೆಸಬೇಕು. ಅಕ್ಷರಸ್ಥರು ಅನಕ್ಷರಸ್ಥರು ಎಲ್ಲರೂ ತಮ್ಮ ಗ್ರಾಹಕ ಸೇವೆಗಳ ಕುರಿತು ಅರಿವು ಹೊಂದಿರಬೇಕು ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುಷ್ಪಲತ ಸಿ.ಎಂ ಅವರು ಮಾತನಾಡಿ, ಸರಕು, ಸಾಮಾನು ಖರೀದಿ ಬಗ್ಗೆ ಎಲ್ಲರೂ ತಿಳುವಳಿಕೆ ಪಡೆದಿರಬೇಕು. ಪ್ರತಿ ವಸ್ತುವಿನ ಮೇಲೆ ಮುದ್ರಿಸಿರುವ ಅಂಶಗಳನ್ನು ಗಮನಿಸಬೇಕು. ವಿದ್ಯಾವಂತರು ಗ್ರಾಹಕರ ಹಕ್ಕುಗಳ ಬಗ್ಗೆ ಹೆಚ್ಚು ತಿಳುವಳಿಕೆ ಮೂಡಿಸಬೇಕು. ಕಾನೂನು ವಿದ್ಯಾರ್ಥಿಗಳು ಗ್ರಾಮೀಣ ಜನರಲ್ಲಿ, ಕೃಷಿಕರಲ್ಲಿ ಬೀಜ, ಗೊಬ್ಬರ, ಕಳೆನಾಶಕ ಮತ್ತು ಇತರ ಕೃಷಿ ಪರಿಕರಗಳ ದರ, ಸೇವೆ ಕುರಿತು ಅರಿವು ಮೂಡಿಸಬೇಕು ಎಂದು ಹೇಳಿದರು.
ಜನಾದೇಶ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಅಧ್ಯಕ್ಷೆ ಮಾಧುರಿ ಕುಲಕರ್ಣಿ ಗ್ರಾಹಕರ ಹಕ್ಕುಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
Kshetra Samachara
22/03/2022 02:18 pm