ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ಜಿಲ್ಲೆಯಲ್ಲಿ 3 ಕೋಟಿ ವೆಚ್ಚದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ: ಸಚಿವ ಮುನೇನಕೊಪ್ಪ

ಧಾರವಾಡ: ವಾಲ್ಮೀಕಿ ಋಷಿ ಕೇವಲ ಒಂದು ಸಮುದಾಯದ ವ್ಯಕ್ತಿಯಲ್ಲ ಇಡೀ ಮನುಕುಲಕ್ಕೆ ಮಾದರಿಯಾದ್ದಾರೆ ಎಂದು ಕೈಮಗ್ಗ, ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿಂದು ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಹರ್ಷಿ ವಾಲ್ಮೀಕಿ ರಾಮಾಯಣವನ್ನು ಇಡೀ ಜಗತ್ತಿಗೆ ಪರಿಚಯಿಸಿದ್ದಾರೆ. ಅವರು ವಾಲ್ಮೀಕಿ ಸಮುದಾಯಕ್ಕೆ ಮಾತ್ರ ಸೀಮಿತವಲ್ಲ, ಇಡೀ ಜಗತ್ತಿಗೆ ಮಾದರಿಯಾಗಿದ್ದಾರೆ. ಶಿವನಿಗೆ ಕಣ್ಣನ್ನು ನೀಡಿರುವ ಮತ್ತು ಲವ-ಕುಶರಿಗೆ ವಿದ್ಯಾದಾನ ಮಾಡಿರುವ ಹಿರಿಮೆ ವಾಲ್ಮೀಕಿ ಸಮಾಜಕ್ಕಿದೆ. ಜಿಲ್ಲೆಯಲ್ಲಿ ವಾಲ್ಮೀಕಿ ಸಮುದಾಯ ಭವನವನ್ನು 3 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವುದು. 2020-21 ರಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು 4 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ವಾಲ್ಮೀಕಿಯು ನಾಡು ಕಂಡ ಶ್ರೇಷ್ಠ ಸಂತ. ಜಗತ್ತಿಗೆ ಅಪಾರವಾದ ಕೊಡುಗೆ ನೀಡಿದ್ದಾರೆ. ಅವರು ಒಂದು ಜಾತಿಗೆ ಸೇರದೆ ಎಲ್ಲರ ಗುರುಗಳಾಗಿದ್ದಾರೆ. ಅವರ ತತ್ವ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಂಡು ಬದುಕಬೇಕು. ಸಮುದಾಯ ಭವನವನ್ನು ನಿರ್ಮಾಣ ಮಾಡಿದರೆ ಸಾಲದು ಅದನ್ನು ಸರಿಯಾದ ರೀತಿಯಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸದುಪಯೋಗ ಪಡಿಸಿಕೊಳ್ಳಬೇಕು. ಡಿಜಿಟಲ್ ಮಾಧ್ಯಮಗಳ ಮೂಲಕ ವಾಲ್ಮೀಕಿಯವರ ಜೀವನ ಕುರಿತು ತಿಳಿಸುವ ವಾತಾವರಣ ನಿರ್ಮಾಣವಾಗಬೇಕು. ಪರಿಶಿಷ್ಟ ವರ್ಗದ ಮೀಸಲಾತಿ ಹೆಚ್ಚಳ ಕುರಿತು ಸಂಬಂಧಪಟ್ಟ ಮಂತ್ರಿ ಮತ್ತು ಅಧಿಕಾರಿಗಳಿಗೆ ಸಲಹೆ ನೀಡುತ್ತೇನೆ ಎಂದರು.

ಸುರಪುರ ಕ್ಷೇತ್ರದ ಶಾಸಕ ರಾಜುಗೌಡ(ನರಸಿಂಹನಾಯಕ)ಮಾತನಾಡಿ, ವಾಲ್ಮೀಕಿ ಮಹಾ ಋಷಿಯಾಗಿದ್ದಾರೆ. ಅವರು ರಾಮಾಯಣದ ಮೂಲಕ ತಂದೆಯ ಆದೇಶವನ್ನು ಮಗ ಯಾವ ರೀತಿ ಪಾಲಿಸಬೇಕು. ಮಡದಿ-ಗಂಡ, ಅಣ್ಣ-ತಮ್ಮ, ಅತ್ತಿಗೆ-ಮೈದುನ ಮತ್ತು ಗುರು- ಶಿಷ್ಯರ ಸಂಬಂಧ ತಿಳಿಸಿದ್ದಾರೆ. ಇಂದಿಗೂ ಕೂಡ ಯಾವುದೇ ಗ್ರಂಥ ,ಸಾಹಿತ್ಯ ಸಿದ್ಧವಾಗಬೇಕಾದರೆ ಅವು ರಾಮಾಯಣವನ್ನು ಅಡಿಪಾಯವಾಗಿ ಬಳಸಿಕೊಳ್ಳುತ್ತವೆ. ಸಮಾಜಕ್ಕೆ ರಾಮಾಯಣದಂತ ಗ್ರಂಥ ನೀಡಿರುವ ಸಮುದಾಯಕ್ಕೆ ನಾವೆಲ್ಲ ಸೇರಿದ್ದೇವೆ ಎನ್ನುವುದು ಹೆಮ್ಮೆಯ ಸಂಗತಿ ಎಂದರು.

ಕರ್ನಾಟಕ ಮಹಾವಿದ್ಯಾಲಯದ ಕನ್ನಡ ಅಧ್ಯಾಪಕ ಡಾ. ಬಸವರಾಜ್ ನಾಗವ್ವನವರ ಮಹರ್ಷಿ ವಾಲ್ಮೀಕಿ ಜೀವನ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ 2021-22 ನೇ ಸಾಲಿನಲ್ಲಿ ಅತೀ ಹೆಚ್ಚು ಅಂಕ ಪಡೆದ ಪರಿಶಿಷ್ಟ ವರ್ಗದ ಎಸ್.ಎಸ್.ಎಲ್.ಸಿ, ಪಿಯುಸಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಜಿಲ್ಲಾಡಳಿತದ ವತಿಯಿಂದ ವಾಲ್ಮೀಕಿಯವರ ಜೀವನ ಚರಿತ್ರೆ ಪುಸ್ತಕ, ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

Edited By : PublicNext Desk
Kshetra Samachara

Kshetra Samachara

20/10/2021 10:08 pm

Cinque Terre

2.18 K

Cinque Terre

0

ಸಂಬಂಧಿತ ಸುದ್ದಿ