ಧಾರವಾಡ: ಕರ್ನಾಟಕ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಮತದಾರರ ಪಟ್ಟಿಯನ್ನು ತಯಾರಿಸುವ ಕುರಿತು ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಮತದಾರರ ನೋಂದಣಾಧಿಕಾರಿಗಳು ಇಂದು ಅಧಿಸೂಚನೆ ಹೊರಡಿಸಿದ್ದಾರೆ ಎಂದು ಕರ್ನಾಟಕ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕರ್ನಾಟಕ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಮತದಾರರ ಪಟ್ಟಿಯನ್ನು ತಯಾರಿಸಲು ಸಂಬಂಧಪಟ್ಟ ಎಲ್ಲ ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳಿಗೆ ಮತದಾರರ ನೋಂದಣಿ ನಿಯಮಗಳು 1960 ರ ಅಡಿ ನಿಯಮ 31 (3) ರ ಮೇರೆಗೆ ಸೂಚನೆ ನೀಡಲಾಗಿದೆ.
ಕರ್ನಾಟಕ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ವ್ಯಾಪ್ತಿಯ ಧಾರವಾಡ ಜಿಲ್ಲೆಯ ಎಲ್ಲ ತಾಲೂಕುಗಳ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯ ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳು ಕ್ರಮ ವಹಿಸಬೇಕು. ಧಾರವಾಡ ಜಿಲ್ಲೆಯ ಸಾಮಾನ್ಯ ನಿವಾಸಿಯಾಗಿರುವ ಮತ್ತು ನವೆಂಬರ್ 01, 2021 ಕ್ಕೆ ಮೊದಲು ಆರು ವರ್ಷ ಅವಧಿಯಲ್ಲಿ ಕನಿಷ್ಠ ಒಟ್ಟು ಮೂರು ವರ್ಷಗಳಷ್ಟು, ಪ್ರಾಢಶಾಲೆಗಿಂತ ಕಡಿಮೆಯಲ್ಲದ ದರ್ಜೆಯ ರಾಜ್ಯದೊಳಗಿನ ಯಾವುದೇ ಶೈಕ್ಷಣಿಕ ಸಂಸ್ಥೆಗಳಲ್ಲಿ ಭೋದನಾ ವೃತ್ತಿಯಲ್ಲಿ ನಿರತರಾಗಿರುವ ಪ್ರತಿಯೊಬ್ಬ ವ್ಯಕ್ತಿಯು ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಲು ಅರ್ಹನಾಗಿರುತ್ತಾರೆ ಮತ್ತು ಈ ರೀತಿ ನಿರ್ಧಿಷ್ಟಪಡಿಸಿದ ಶೈಕ್ಷಣಿಕ ಸಂಸ್ಥೆಗಳ ಪಟ್ಟಿಯು ಕರ್ನಾಟಕ ಪಶ್ಚಿಮ ಶಿಕ್ಷಕರ ಮತಕ್ಷೇತ್ರ ವ್ಯಾಪ್ತಿಯ ಮತದಾರ ಪಟ್ಟಿಯ ಎಲ್ಲ ಸಹಾಯಕ ಮತದಾರ ನೋಂದಣಿ ಅಧಿಕಾರಿಗಳಲ್ಲಿ ಲಭ್ಯವಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಅರ್ಹ ಪ್ರತಿಯೊಬ್ಬ ವ್ಯಕ್ತಿಯು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಮತದಾರರ ನೋಂದಣಿ ನಿಯಮಗಳ ಪ್ರಕಾರ ನಮೂನೆ 19 ನ್ನು ಭರ್ತಿ ಮಾಡಿ, ಅವಶ್ಯಕ ದಾಖಲೆಗಳನ್ನು ಲಗತ್ತಿಸಿ ಧಾರವಾಡ ಜಿಲ್ಲೆಯಲ್ಲಿ ಸಹಾಯಕ ಮತದಾರರ ನೋಂದಣಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಶೀಲ್ದಾರರ ಮತ್ತು ಮಹಾನಗರ ಪಾಲಿಕೆಯ ಆಯುಕ್ತರು, ಸಹಾಯಕ ಆಯುಕ್ತರು ಅಥವಾ ನಿಯೋಜಿತ ಅಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ.
ಕರ್ನಾಟಕ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಮತದಾರರ ಪಟ್ಟಿಯನ್ನು ಪ್ರತಿ ಚುನಾವಣೆಯ ಮೊದಲು ಹೊಸದಾಗಿ ತಯಾರಿಸಬೇಕಾಗಿದ್ದು, ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಲ್ಲಿರುವ ಎಲ್ಲಾ ವ್ಯಕ್ತಿಗಳು ಸಹ ನಿಗದಿತ ನಮೂನೆಯಲ್ಲಿ ಹೊಸದಾಗಿ ಅರ್ಜಿಗಳನ್ನು ನವೆಂಬರ್ 06, 2021 ರಂದು ಅಥವಾ ಅದಕ್ಕೂ ಮೊದಲು ಸಲ್ಲಿಸಲು ಕರ್ನಾಟಕ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
01/10/2021 07:19 pm