ಹುಬ್ಬಳ್ಳಿ:ಕೋವಿಡ್-19 ಲಾಕ್ ಡೌನ್ ಕಾರಣದಿಂದ ಕಳೆದ ಎಂಟು ತಿಂಗಳಿಂದ ಸ್ಥಗಿತಗೊಂಡಿದ್ದ ಹುಬ್ಬಳ್ಳಿಯಿಂದ ಮಹಾರಾಷ್ಟ್ರದ ಶಿರಡಿಗೆ ಎಸಿ ಸ್ಲೀಪರ್ ಬಸ್ ಮತ್ತು ತಮಿಳುನಾಡಿನ ಚೆನ್ನೈಗೆ ಮಲ್ಟಿ ಅ್ಯಕ್ಸಲ್ ವೋಲ್ವೋ ಬಸ್ ಸಂಚಾರವನ್ನು ಮತ್ತೆ ಆರಂಭಿಸಲಾಗಿದೆ.
ಈ ಬಸ್ಸುಗಳು ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದಿಂದ ಹೊರಡುತ್ತವೆ ಎಂದು ವಾಕರಸಾ ಸಂಸ್ಥೆ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಶಿರಡಿಗೆ ಹೋಗುವ ಸ್ಲೀಪರ್ ಬಸ್ಸು ಸಂಜೆ 7 ಗಂಟೆಗೆ ಹುಬ್ಬಳ್ಳಿಯಿಂದ ಹೊರಡುತ್ತದೆ. ಧಾರವಾಡ,ಬೆಳಗಾವಿ,ಪೂನಾ,ಅಹ್ಮದನಗರ ಮಾರ್ಗವಾಗಿ ಮರುದಿನ ಬೆಳಿಗ್ಗೆ 7-30ಕ್ಕೆ ಶಿರಡಿ ತಲುಪುತ್ತದೆ.
ಶಿರಡಿಯಿಂದ ಸಂಜೆ 7 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 7-30ಕ್ಕೆ ಹುಬ್ಬಳ್ಳಿಗೆ ಆಗಮಿಸುತ್ತದೆ.
ಚೆನ್ನೈಗೆ ಹೋಗುವ ವೋಲ್ವೋ ಬಸ್ಸು ರಾತ್ರಿ 10-30ಕ್ಕೆ ಹುಬ್ಬಳ್ಳಿಯಿಂದ ಹೊರಡುತ್ತದೆ. ಬೆಂಗಳೂರು, ಹೊಸೂರು, ಕೃಷ್ಣಗಿರಿ ಮಾರ್ಗವಾಗಿ ಮರುದಿನ ಮಧ್ಯಾಹ್ನ 1.30 ಕ್ಕೆ ಚೆನ್ನೈ ತಲುಪುತ್ತದೆ.
ಚೆನ್ನೈಯಿಂದ ಮಧ್ಯಾಹ್ನ 3-15ಕ್ಕೆ ಹೊರಟು ಮರುದಿನ ಬೆಳಗ್ಗೆ 7-00ಕ್ಕೆ ಹುಬ್ಬಳ್ಳಿಗೆ ಆಗಮಿಸುತ್ತದೆ.
ಮುಂಗಡ ಬುಕ್ಕಿಂಗ್,ರಿಯಾಯಿತಿ:
ಈ ಬಸ್ಸುಗಳಿಗೆ ಆನ್ ಲೈನ್ ಮತ್ತು ಮುಂಗಡ ಬುಕ್ಕಿಂಗ್ ಕೌಂಟರುಗಳ ಮೂಲಕ ಮುಂಚಿತವಾಗಿ ಆಸನಗಳನ್ನು ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ.
ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವಾಗ 4 ಅಥವ 4 ಕ್ಕಿಂತ ಹೆಚ್ಚಿನ ಆಸನಗಳಿಗೆ ಒಂದೇ ಟಿಕೆಟ್ ಪಡೆದುಕೊಂಡರೆ ಮೂಲ ಪ್ರಯಾಣದರದಲ್ಲಿ ಶೇಕಡ 5 ರಷ್ಟು ರಿಯಾಯಿತಿ ನೀಡಲಾಗುತ್ತದೆ.
ಹೋಗುವ ಮತ್ತು ಬರುವಾಗಿನ ಪ್ರಯಾಣಕ್ಕೆ ಆಸನಗಳನ್ನು ಒಮ್ಮೆಗೇ ಕಾಯ್ದಿರಿಸಿದರೆ ಬರುವಾಗಿನ ಪ್ರಯಾಣದ ಮೂಲ ಟಿಕೆಟ್ ದರದಲ್ಲಿ ಶೇ. 10 ರಷ್ಟು ರಿಯಾಯಿತಿ ನೀಡಲಾಗುತ್ತದೆ.
ಲಾಕ್ ಡೌನ್ ಪೂರ್ವದಲ್ಲಿ ಹುಬ್ಬಳ್ಳಿಯಿಂದ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ,ಗೋವಾ,ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿಗೆ ವೋಲ್ವೋ,ಸ್ಲೀಪರ್, ರಾಜಹಂಸ ಹಾಗೂ ವೇಗದೂತ ಸಾರಿಗೆಗಳು ಸೇರಿದಂತೆ ಒಟ್ಟು 65 ಬಸ್ಸುಗಳು ಸಂಚರಿಸುತ್ತಿದ್ದವು.
ಅವುಗಳ ಪೈಕಿ ಇದುವರೆಗೆ 50 ಬಸ್ಸುಗಳನ್ನು ಆರಂಭಿಸಲಾಗಿದೆ. ಸಾರ್ವಜನಿಕರ ಬೇಡಿಕೆಗೆ ತಕ್ಕಂತೆ ಹಂತ ಹಂತವಾಗಿ ಇನ್ನುಳಿದ ಬಸ್ಸುಗಳ ಸಂಚಾರವನ್ನು ಮತ್ತೆ ಆರಂಭಿಸಲಾಗುತ್ತದೆ ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ.
Kshetra Samachara
18/11/2020 07:09 pm