ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಪ ಚುನಾವಣೆ: 8 ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ

ಧಾರವಾಡ: ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ಕಾರ್ಯ ಇಂದು ಜರುಗಿತು. 19 ಅಭ್ಯರ್ಥಿಗಳಿಂದ ಸಲ್ಲಿಸಲ್ಪಟ್ಟಿದ್ದ 32 ನಾಮಪತ್ರಗಳಲ್ಲಿ 8 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡಿವೆ. 11 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ.

ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ಚುನಾವಣಾ ವೀಕ್ಷಕರಾಗಿರುವ ಕರ್ನಾಟಕ ಸರ್ಕಾರದ ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ , ಚುನಾವಣಾಧಿಕಾರಿಗಳಾಗಿರುವ ಪ್ರಾದೇಶಿಕ ಆಯುಕ್ತರಾದ ಅಮ್ಲಾನ್ ಆದಿತ್ಯ ಬಿಸ್ವಾಸ್ ,ಸಹಾಯಕ ಚುನಾವಣಾಧಿಕಾರಿಯಾಗಿರುವ ಧಾರವಾಡ

ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಅವರು ನಾಮಪತ್ರ ಪರಿಶೀಲನೆ ಕಾರ್ಯ ಕೈಗೊಂಡರು.

ಆಜಾದ್ ಮಜದೂರ್ ಕಿಸಾನ್ ಪಕ್ಷದ ಪ್ರಕಾಶ ಕಾಂಬಳೆ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ಮಂಜುನಾಥ ಭದ್ರಪ್ಪ ಬೆಳವತ್ತಿ, ಜನತಾದಳ ( ಸಂಯುಕ್ತ) ಮಲ್ಲಿಕಾರ್ಜುನ ಚನ್ನಪ್ಪ ಗಂಗಾಧರ, ಪಕ್ಷೇತರರಾದ, ಅಶೋಕ ಮಲ್ಲಪ್ಪ ಜವಳಿ, ಕೃಷ್ಣ ಹನುಮಂತಪ್ಪ ಬಳಿಗಾರ, ಚನ್ನಪ್ಪ ಪಿ.ಬ್ರಹ್ಮನಪಾಡ, ಚರಣರಾಜ್ ಕೆ.ಎ.,ರವಿ ಶಿವಪ್ಪ ಪಡಸಲಗಿ ಅವರು ಸಲ್ಲಿಸಿದ್ದ ನಾಮಪತ್ರಗಳಲ್ಲಿ ನೈಜ ಸೂಚಕರು, ಅಫಿದವಿಟ್ ಗಳಲ್ಲಿ ನ್ಯೂನ್ಯತೆ, ಮತದಾರರ ಪಟ್ಟಿಯ ಪ್ರಮಾಣೀಕೃತ ಪ್ರತಿಗಳ ಕೊರತೆ ಮತ್ತಿತರ ಅಂಶಗಳು ಕಂಡು ಬಂದ ಹಿನ್ನೆಲೆಯಲ್ಲಿ ಈ ಎಂಟು ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡವು.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಆರ್. ಎಂ.ಕುಬೇರಪ್ಪ, ಜನತಾದಳ ( ಜಾತ್ಯಾತೀತ)ದ ಶಿವಶಂಕರ ಚನ್ನಪ್ಪ ಕಲ್ಲೂರ, ಭಾರತೀಯ ಜನತಾ ಪಕ್ಷದ ಸಿದ್ಧಲಿಂಗಪ್ಪ ವಿ.ಸಂಕನೂರ, ಕರ್ನಾಟಕ ರಾಷ್ಟ್ರ ಸಮಿತಿಯ ಶಿವರಾಜ ಕೆಂಚಪ್ಪ ಕಾಂಬಳೆ, ಶಿವಸೇನಾ ಪಕ್ಷದ ಸೋಮಶೇಖರ ವಿರುಪಾಕ್ಷ ಉಮರಾಣಿ, ಪಕ್ಷೇತರ ಅಭ್ಯರ್ಥಿಗಳಾದ ದಶರಥ ಚಂದ್ರಹಾಸ ರಂಗರೆಡ್ಡಿ, ಬಸನಗೌಡ ದ್ಯಾಮನಗೌಡ ಹಿರೇಗೌಡ್ರ, ಬಸವರಾಜ ಹೆಚ್.ಗುರಿಕಾರ, ಬಸವರಾಜ ಎಸ್.ತೇರದಾಳ, ಮಹ್ಮದ ಶಫೀವುದ್ದೀನ್ ಎಸ್ ನಾಗರಕಟ್ಟಿ ಹಾಗೂ ಶಿವಕುಮಾರ ಮಹಾದೇವಪ್ಪ ತಳವಾರ ಈ ಹನ್ನೊಂದು ಜನ ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಚುನಾವಣಾಧಿಕಾರಿಗಳಾಗಿರುವ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ.

ನಾಳೆ ಎರಡನೇ ಶನಿವಾರವೂ ಚುನಾವಣಾಧಿಕಾರಿಗಳ ಕಚೇರಿ ಕಾರ್ಯನಿರ್ವಹಿಸಲಿದ್ದು ಈ ದಿನವೂ ಸಹ ನಾಮಪತ್ರಗಳನ್ನು ಹಿಂತೆಗೆದುಕೊಳ್ಳಬಹುದು. ಸೋಮವಾರ ಅ.12 ಮಧ್ಯಾಹ್ನ‌ 3 ಗಂಟೆಯವರೆಗೆ ನಾಮಪತ್ರ ವಾಪಸ್ಸು ಪಡೆಯಲು ಕೊನೆಯ ದಿನವಾಗಿದೆ.

Edited By : Nirmala Aralikatti
Kshetra Samachara

Kshetra Samachara

09/10/2020 07:49 pm

Cinque Terre

10.69 K

Cinque Terre

0

ಸಂಬಂಧಿತ ಸುದ್ದಿ