ಈ ಚೇತನದ ಪರಿಸರ ಸೇವೆ ಅಮೋಘ. ಸರ್ಕಾರ ಕೊಡುವ ಗೌರವಧನ ಮಾತ್ರ ಪಡೆಯುವ ಈ ಜೀವ, ಯಾವ ಪ್ರತಿಫಲ ಅಪೇಕ್ಷೆಯಿಲ್ಲದೆ ಪ್ರಕೃತಿ ಮಾತೆಗೆ ಕೊಟ್ಟ ಕೊಡುಗೆ ಅಪರಿಮಿತ. ಹಾಗಾದರೆ ಈ ಸಾಧಕ ಯಾರು ಅಂತೀರಾ, ಈ ಸ್ಟೋರಿ ನೋಡೋಣ...
ಹೌದು, ಹೀಗೆ ತಮ್ಮ ವಾಹನದಲ್ಲಿ ಸಸಿ ಇಟ್ಟು ರೈತರಿಗೆ ನೀಡುತ್ತಿರುವ ಈ ಪರಿಸರ ಪ್ರೇಮಿ ಹೆಸರು ಜಯವಂತ ಬಾಂಬುಲೆ. ಬಡತನದ ಬೇಗೆಯಲ್ಲಿ ಬೆಂದು ಎಸ್ಸೆಸೆಲ್ಸಿಗೇ ಮಂಗಳ ಹಾಡಿದರು. ಮುಂದೆ ತಮ್ಮ ಬಾಳ ಬಂಡಿ ಸಾಗಿಸಲು ಸಾಮಾಜಿಕ ಅರಣ್ಯ ಧಾರವಾಡ ವಿಭಾಗದ ಕಲಘಟಗಿ ವಲಯದಲ್ಲಿ ಕೇವಲ 250 ರೂ. ಗೆ ಅರಣ್ಯ ಪ್ರೇರಕರಾಗಿ ಸೇವೆ ಆರಂಭಿಸಿದರು.
ಈ ಕೆಲಸವನ್ನು ನಿಷ್ಠೆ, ನಿಯತ್ತು, ಪ್ರಾಮಾಣಿಕತೆಯಿಂದ 35 ವರ್ಷಗಳಿಂದಲೂ ಕಲಘಟಗಿ ಹಾಗೂ ಸುತ್ತಮುತ್ತಲ ತಾಲೂಕುಗಳಲ್ಲಿ ಮಾಡುತ್ತಾ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ. ಈ ಕಾರ್ಯಕ್ಕೆ ಹಲವು ಪ್ರಶಸ್ತಿಗಳು ಅರಸಿಕೊಂಡು ಬಂದಿವೆ. ಇಲಾಖೆಯ ಅನೇಕ ಯೋಜನೆಗಳಡಿ 2 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ಜಯವಂತ ನೆಟ್ಟು, ಪೋಷಿಸಿದ್ದು ಈಗ ಹೆಮ್ಮರವಾಗಿವೆ.
ವಿಪರ್ಯಾಸ ಎಂದರೆ ಜಯವಂತರಿಗೆ ಸೇವಾ ಭದ್ರತೆ ಇಲ್ಲ. ನಿವೃತ್ತಿಗೆ 2- 3 ತಿಂಗಳಷ್ಟೇ ಉಳಿದಿದ್ದು, ಸರಕಾರದ ನಿವೃತ್ತಿ ವೇತನಕ್ಕಾಗಿ ಅನೇಕ ರಾಜಕಾರಣಿಗಳು, ಅಧಿಕಾರಿಗಳನ್ನು ಭೇಟಿಯಾಗಿ ಗೋಗರೆದಿದ್ದರೂ ಪ್ರಯೋಜನವಾಗಿಲ್ಲ.
ಕನಿಷ್ಠ ಪಕ್ಷ ಈ ಬಡಪಾಯಿ ತ್ಯಾಗಮಯಿಯ ನಿಸ್ವಾರ್ಥ ಸೇವೆಗೆ ಸರಕಾರ ನಿವೃತ್ತಿ ವೇತನವನ್ನಾದರೂ ನೀಡಿ ಪ್ರಕೃತಿ ಮಾತೆಯ ಇನ್ನಷ್ಟು ಸೇವಾ ಕೈಂಕರ್ಯಕ್ಕೆ ಪ್ರೋತ್ಸಾಹಿಸಬೇಕಿದೆ.
- ಈರಣ್ಣ ವಾಲಿಕಾರ, ʼಪಬ್ಲಿಕ್ ನೆಕ್ಸ್ಟ್ʼ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/04/2022 03:51 pm