ಹುಬ್ಬಳ್ಳಿ: ಧಾರವಾಡ ಜಿಲ್ಲೆಯಾದ್ಯಂತ ವರುಣನ ಅಬ್ಬರಕ್ಕೆ ಅನ್ನದಾತ ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದ್ದಾನೆ. ಮುಂದುವರಿದ ವರುಣನ ಆರ್ಭಟಕ್ಕೆ ದೇಶಕ್ಕೆ ಅನ್ನ ಹಾಕುವ ಅನ್ನದಾತನ ಜೀವನ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಧಾರಾಕಾರ ಮಳೆಯಿಂದ ಹೊಲಗಳಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿದ್ದು, ಕೈಗೆ ಬಂದಿರುವ ತುತ್ತು ಬಾಯಿಗೆ ಬಂದಂತಾಗಿದೆ.
ರಾಶಿ ಮಾಡಲು ಕಿತ್ತಿದ್ದ ಶೇಂಗಾ, ಸೋಯಾಬಿನ್ ನೀರುಪಾಲಾಗಿದ್ದು, ಮಳೆ ನೀರಲ್ಲಿ ಮುಳುಗಿ ಹೋಗಿದೆ. ಅಲ್ಲದೆ, ಇದ್ದ ಸ್ಥಳದಲ್ಲಿಯೇ ಮೊಳಕೆ ಬಂದು ಕೊಳೆಯುತ್ತಿರುವ ಬೆಳೆಯಿಂದ ಅನ್ನದಾತ ಕಣ್ಣೀರು ಹಾಕುವಂತಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿಯಲ್ಲಿದ್ದು, ಹತ್ತಿ, ಮೆಕ್ಕೆಜೋಳ, ಜೋಳ, ತೊಗರಿ ಇತ್ಯಾದಿ ಬೆಳೆಗಳು ಹಾನಿಯಾಗಿದೆ.
ಇನ್ನೂ ಕಳೆದ ಕೆಲ ದಿನಗಳಿಂದ ಸುರಿದ ಮಳೆಗೆ ಮುಂಗಾರು ಬೆಳೆ ಹಾನಿಯಾಗಿತ್ತು. ಇದೀಗ ಹಿಂಗಾರು ಬೆಳೆಗೂ ವರುಣನ ಕಂಟಕ ಎದುರಾಗಿದ್ದು, ಹುಬ್ಬಳ್ಳಿ, ಕುಂದಗೋಳ, ಕಲಘಟಗಿ ಮೊದಲಾದ ತಾಲೂಕುಗಳಲ್ಲಿ ಅಪಾರ ಬೆಳೆ ಹಾನಿಯಾಗಿದೆ. ಈ ಹಿಂದೆ ಕಟ್ಟಿರುವ ಬೆಳೆ ವಿಮೆ ಹಣವೂ ಬಂದಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಪರಿಹಾರವೂ ಬಂದಿಲ್ಲ. ಇದೀಗ ಮತ್ತೊಮ್ಮೆ ಬೆಳೆ ಹಾನಿಯಾದ್ರೂ ಏನು ಮಾಡೋದು ಎಂದು ಅನ್ನದಾತ ಕಣ್ಣೀರು ಹಾಕುತ್ತಿದ್ದಾನೆ.
ಒಟ್ಟಿನಲ್ಲಿ ಇಷ್ಟೆಲ್ಲಾ ಕಷ್ಟ ಅನುಭವಿಸುತ್ತಿರುವ ಅನ್ನದಾತರು ಒಂದು ತೊಟ್ಟು ವಿಷ ಕೊಟ್ಟರೆ ಹೊಲದಲ್ಲಿಯೇ ಸಾಯುತ್ತೇವೆ ಎಂದು ಅಳಲನ್ನು ತೋಡಿಕೊಂಡಿದ್ದಾರೆ. ಕೂಡಲೇ ಅತಿವೃಷ್ಟಿ ಹಾನಿಯ ಸಮೀಕ್ಷೆ ಮಾಡಬೇಕು. ಅಲ್ಲದೆ, ಮುಂಗಾರು ಮತ್ತು ಹಿಂಗಾರು ಬೆಳೆ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ.
Kshetra Samachara
08/10/2022 03:38 pm