ನವಲಗುಂದ: ಮರಳು, ಸಿಮೆಂಟ್ ಹೊತ್ತ ಬೃಹತ್ ಗಾತ್ರದ ವಾಹನಗಳು ಜನನಿಬಿಡ ಪ್ರದೇಶಗಳಲ್ಲಿ ಸಂಚಾರ ನಡೆಸುತ್ತಿವೆ. ನೂರಾರು ಮನೆಗಳು ಚಿಕ್ಕ ಚಿಕ್ಕ ಮಕ್ಕಳು ಇರುವ ಇಂತಹ ಸ್ಥಳದಲ್ಲಿ ವಾಹನಗಳ ಸಂಚಾರ ಈಗ ಸ್ಥಳೀಯರಲ್ಲಿ ಆತಂಕವನ್ನು ಹೆಚ್ಚಿಸಿದೆ. ಈ ವಾಹನಗಳ ಸಂಚಾರದಿಂದ ರಸ್ತೆಗಳು ಹದಗೆಟ್ಟು ಹೋಗುತ್ತಿವೆ ಎಂಬ ಆರೋಪ ಈಗ ಕೇಳಿ ಬರುತ್ತಿದೆ.
ಇಷ್ಟೆಲ್ಲಾ ಸಮಸ್ಯೆಗಳು ಕಂಡು ಬಂದದ್ದು, ನವಲಗುಂದ ಪಟ್ಟಣದ ಬಸ್ತಿ ಪ್ಲಾಟ್‌ನಲ್ಲಿ. ಒಂದೆಡೆ ಮರಳು ರಾಶಿ ಕಂಡು ಬರುತ್ತಿದ್ದು, ಇನ್ನೊಂದೆಡೆ ಲಾರಿಗಳ ಸಂಚಾರದಿಂದ ಈಗ ಇಲ್ಲಿನ ಮನೆಗಳಿಗೆ ಸಂಪರ್ಕ ಕಲ್ಪಿಸುವ ಪೈಪ್‌ಗಳು ಒಡೆದು ಸ್ಥಳೀಯರು ಪರದಾಟ ನಡೆಸುವಂತಾಗಿದೆ.
ಕೇವಲ ವಾಹನಗಳ ಓಡಾಟ ಅಷ್ಟೇ ಅಲ್ಲದೆ ಮೂಲಭೂತ ಸೌಕರ್ಯ ಸಹ ಸಮಸ್ಯೆಯಾಗಿ ಕಾಡುತ್ತಿದೆಯಂತೆ. ಚರಂಡಿಯ ಹೂಳೆತ್ತದೆ ನೀರು ನಿಂತು, ಸೊಳೆಗಳ ಕಾಟ ಸಹ ಹೆಚ್ಚಾಗಿದೆಯಂತೆ, ರಸ್ತೆಯಂತೂ ಮೊದಲೇ ಇಲ್ಲದಂತಾಗಿ, ಇದ್ದಂತ ರಸ್ತೆಯಲ್ಲಿ ವಾಹನಗಳು ಸಿಲುಕಿ, ನೀರಿನ ಪೈಪ್ ಲೈನ್ ಒಡೆದು ಹೋಗುತ್ತಿವೆ ಎಂದು ಸ್ಥಳೀಯರು ಅಳಲನ್ನು ತೋಡಿಕೊಂಡಿದ್ದು ಹೀಗೆ.
ಒಂದೆಡೆ ಬೃಹತ್ ಗಾತ್ರದ ವಾಹನಗಳು, ಇನ್ನೊಂದೆಡೆ ಹಾಳಾದ ರಸ್ತೆ, ಹುಳೆತ್ತದ ಚರಂಡಿ, ಈ ರೀತಿ ಹಲವಾರು ಸಮಸ್ಯೆಗಳಲ್ಲಿ ಇಡೀ ಬಸ್ತಿ ಪ್ಲಾಟ್ ನ ಜನರು ಪರದಾಟ ನಡೆಸಿದ್ದಾರಂತೆ, ಇದರಿಂದ ಮುಕ್ತಿ ಯಾವಾಗ ಸಿಗುತ್ತಪ್ಪ ಅನ್ನೋ ಪರಿಸ್ಥಿತಿ ಬಂದಿದೆ. ಸಂಚರಿಸುವ ಮರಳು, ಸಿಮೆಂಟ್ ಹೊತ್ತ ಬೃಹತ್ ಗಾತ್ರದ ವಾಹನಗಳಿಗೆ ಪೊಲೀಸ್ ಇಲಾಖೆ ಬ್ರೇಕ್ ಹಾಕಬೇಕು ಹಾಗೂ ರಸ್ತೆ ಹಾಗೂ ಚರಂಡಿ ಸ್ವಚ್ಛತೆಗೆ ಪುರಸಭೆ ಮುಂದಾಗಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
-ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ
Kshetra Samachara
14/09/2022 02:42 pm