ಧಾರವಾಡ: ಹುಬ್ಬಳ್ಳಿ, ಧಾರವಾಡ ಮಹಾನಗರ ನೀರು ಸರಬರಾಜು ನಿರ್ವಹಣೆಗಾಗಿ ಕರ್ನಾಟಕ ಜಲಮಂಡಳಿಯವರಿಂದ ಕಳೆದ 20 ವರ್ಷಗಳಿಂದಲೂ ಗುತ್ತಿಗೆ, ದಿನಗೂಲಿ ಹಂಗಾಮಿ ನೌಕರರನ್ನು ನೇಮಕ ಮಾಡಿಕೊಳ್ಳಲಾಗಿದೆ. ಆದರೆ, ಈಗ ನೀರು ಸರಬರಾಜು ನಿರ್ವಹಣೆಯನ್ನು ಮೆ. ಎಲ್ ಆಂಡ್ ಟಿ ಕಂಪೆನಿಗೆ ಗುತ್ತಿಗೆ ವಹಿಸಿ, ಕೆಲಸಕ್ಕೆ ಹೊಸಬರನ್ನು ನೇಮಕ ಮಾಡಿಕೊಳ್ಳಲು ಅವಕಾಶ ಕೊಟ್ಟಿರುವುದನ್ನು ಖಂಡಿಸಿ ಧಾರವಾಡದಲ್ಲಿ ಜಲಮಂಡಳಿ ನೌಕರರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಕಳೆದ ಎರಡು ದಿನಗಳಿಂದ ಜಲಮಂಡಳಿ ಎದುರು ಧರಣಿ ಕುಳಿತಿದ್ದ ನೌಕರರು, ಇಂದು ಸಂಜೆ ಹೊತ್ತಿಗೆ ಜಿಲ್ಲಾಧಿಕಾರಿ ಕಚೇರಿಗೆ ಬಂದು ಪ್ರತಿಭಟನೆ ನಡೆಸಿದರು.
ಜಲಮಂಡಳಿಯಲ್ಲಿ 600ಕ್ಕೂ ಹೆಚ್ಚು ನೌಕರರು 20 ವರ್ಷದಿಂದ ನಿರಂತರ ಕೆಲಸ ಮಾಡುತ್ತಿದ್ದಾರೆ. ಆದರೆ, ಪಾಲಿಕೆಯವರು ಕರ್ನಾಟಕ ಜಲಮಂಡಳಿಯವರಿಂದ ಪ್ರಸ್ತುತ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನು ವರ್ಕ್ ಸಮೇತ ಹಸ್ತಾಂತರಿಸಿಕೊಳ್ಳದೇ ಸಾಮೂಹಿಕವಾಗಿ ವಜಾ ಮಾಡಿ, ಹೊಸಬರನ್ನು ನೇಮಕ ಮಾಡಿಕೊಂಡು ಕೆಲಸ ನಿರ್ವಹಿಸುವಂತೆ ಖಾಸಗಿ ಗುತ್ತಿಗೆದಾರ ಎಲ್ ಆಂಡ್ ಟಿ ಅವರಿಗೆ ಅನುಮತಿ ನೀಡಿದ್ದಾರೆ.
ಇದರಿಂದ 600 ಮಂದಿ ನೌಕರರು ಬೀದಿಗೆ ಬಿದ್ದಂತಾಗಿದೆ. ಕೂಡಲೇ ನೌಕರರನ್ನು ಮೊದಲಿನಂತೆ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂಬುದು ಈ ನೌಕರರ ಒತ್ತಾಯವಾಗಿದೆ.
Kshetra Samachara
28/04/2022 09:17 pm