ಕುಂದಗೋಳ: ತಾಲೂಕಿನ ಪಶುಪತಿಹಾಳ ಗ್ರಾಮದಲ್ಲಿ ಮೃತ್ಯುಂಜಯಪ್ಪಗಳವರ ಜಾತ್ರಾಮಹೋತ್ಸವ ನಿಮಿತ್ತ ಅಪಾರ ಭಕ್ತರ ಸಮೂಹದ ಮಧ್ಯ ಸಂಭ್ರಮದ ಕಡುಬಿನ ಕಾಳಗ ಜರುಗಿತು.
ಕೆರೂರ ವಿರಕ್ತಮಠದ ಶ್ರೀ ವಿಜಯ ಮಹಾಂತ ದೇವರು ಕುದುರೆ ಮೇಲೆ ಕುಳಿತು ರಥೋತ್ಸವನ್ನು ಐದು ಪ್ರದಕ್ಷಿಣೆ ಹಾಕಿ ಕಡುಬಿನ ಕಾಳಗವನ್ನು ಆರಂಭಿಸಿದರು.
ಜಾತ್ರಾ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ನೆರೆದಿದ್ದ ಅಪಾರ ಭಕ್ತರ ಸಮೂಹದ ಮಧ್ಯೆ ಶ್ರೀ ವಿಜಯ ಮಹಾಂತ ದೇವರು, ಪ್ರಸಾದ ರೂಪದಲ್ಲಿ ಬೆಲ್ಲದ ತುಂಡುಗಳನ್ನು ಭಕ್ತರತ್ತ ಎಸೆದು ಕಡುಬಿನ ಕಾಳಗ ನೆರವೇರಿಸಿದರು. ತಾ ಮುಂದು, ನಾ ಮುಂದು ಎಂದು ಸ್ವಾಮೀಜಿಯವರು ತೂರುವ ಬೆಲ್ಲವನ್ನು ಪ್ರಸಾದದ ರೂಪದಲ್ಲಿ ಭಕ್ತರು ಪಡೆಯುವ ಮೂಲಕ ಭಕ್ತಿಯ ಪರಕಾಷ್ಠೆಯನ್ನು ಮೆರೆದರು.
ನಂದಿಕೋಲು ಕುಣಿತ, ಡೊಳ್ಳು ಮೇಳ ಸೇರಿದಂತೆ ವಿವಿಧ ಸಂಗೀತ ಮೇಳಗಳು ಕಡುಬಿನ ಕಾಳಗದ ಉತ್ಸವಕ್ಕೆ ಮೆರಗು ನೀಡಿದವು.
ಬೆಳಗ್ಗೆ ಶ್ರೀ ಮೃತ್ಯುಂಜಯಪ್ಪಗಳವರ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಪುಷ್ಪಾರ್ಚನೆ ಸೇರಿದಂತೆ ವಿವಿಧ ಪೂಜಾ ವಿಧಾನಗಳು ನೆರವೇರಿದವು.
ಉತ್ಸವ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಧಾರವಾಡ ಮುರಘಾಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ರಾಣೆಬೆನ್ನೂರಿನ ಶ್ರೀ ಗುರುಬಸವ ಮಹಾಸ್ವಾಮಿಜಿ, ನೀಲಗುಂದ ಗುದ್ನೇಶ್ವರಮಠದ ಶ್ರೀ ಪ್ರಭುಲಿಂಗ ದೇವರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ದೇವಸ್ಥಾನದ ಸೇವಾ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.
Kshetra Samachara
01/03/2022 09:16 am