ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಸಿಬಿಟಿ ಬಸ್ ನಿಲ್ದಾಣ ಇತ್ತೀಚೆಗಷ್ಟೇ ನಿರ್ಮಾಣವಾಗಿರುವ ಬಸ್ ನಿಲ್ದಾಣ. ಆದರೆ ಗುಟ್ಕಾ ತಿನ್ನುವವರ ಕೈಯಲ್ಲಿ ಬಸ್ ನಿಲ್ದಾಣದ ಚಿತ್ರಣವೇ ಹಾಳಾಗಿ ಹೋಗಿತ್ತು. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಸ್ವಯಂಪ್ರೇರಿತರಾಗಿ ಸ್ವಚ್ಚತೆಯನ್ನು ಮಾಡಿದರು.
ನಗರ ಸಾರಿಗೆ ಸಿಬ್ಬಂದಿ ಸಿಬಿಟಿ ಬಸ್ ನಿಲ್ದಾಣದ ಅವ್ಯವಸ್ಥೆಗೆ ಬೇಸತ್ತು. ಬೆಳ್ಳಂಬೆಳಿಗ್ಗೆ ಸ್ವಚ್ಚತೆ ಮಾಡಲು ಮುಂದಾಗಿದ್ದು, ಬಸ್ ನಿಲ್ದಾಣವನ್ನು ತೊಳೆಯುವ ಮೂಲಕ ಹಾಗೂ ಕಸ ಗೂಡಿಸುವ ಮೂಲಕ ಸ್ವಚ್ಚತೆ ಮಾಡಿದರು. ಇನ್ನೂ ಎಲ್ಲೆಂದರಲ್ಲಿ ಉಗುಳಿರುವ ಗುಟ್ಕಾ ಕಲೆಯನ್ನು ಕೈಯಲ್ಲಿ ಬ್ರಷ್ ಹಿಡಿದುಕೊಂಡು ಸ್ವಚ್ಛ ಮಾಡುವ ಮೂಲಕ ಗುಟ್ಕಾ, ಎಲೆ ಅಡಿಕೆ ತಿಂದು ಉಗುಳುವವರಿಗೆ ಮನವಿ ಮಾಡಿದ್ದಾರೆ.
ಇನ್ನೂ ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ವಿವೇಕಾನಂದ ವಿಶ್ವಜ್ಞ ಅವರ ಮಾರ್ಗದರ್ಶನದಲ್ಲಿ ಇಂತಹ ಮಹತ್ವದ ಕಾರ್ಯಕ್ಕೆ ಮುಂದಾಗಿದ್ದಾರೆ. ಕರ್ತವ್ಯ ನಿರ್ವಹಿಸುವ ಜೊತೆಗೆ ಇಂತಹ ಸಾಮಾಜಿಕ ಜವಾಬ್ದಾರಿ ನಿರ್ವಹಿಸುತ್ತಿರುವುದು ವಿಶೇಷವಾಗಿದೆ. ಅಲ್ಲದೇ ನಿಮ್ಮ ಆರೋಗ್ಯದ ಕಾಳಜಿಯೇ ನಮ್ಮ ಹೊಣೆ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ.
ಒಟ್ಟಿನಲ್ಲಿ ಸಿಬ್ಬಂದಿಯ ಕಾರ್ಯಕ್ಕೆ ಎಲ್ಲೆಡೆಯೂ ಪ್ರಶಂಸೆ ವ್ಯಕ್ತವಾಗುತ್ತಿದೆ. ಅಲ್ಲದೇ ಜನರು ಜವಾಬ್ದಾರಿಯಿಂದ ಸ್ವಚ್ಚತೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕಿದೆ. ಅಲ್ಲದೇ ಇದೇ ವೇಳೆ ಮಾಸ್ಕ್ ಧರಿಸದೇ ಓಡಾಡುವವರಿಗೆ ತಮ್ಮ ಹಣದಲ್ಲಿಯೇ ಮಾಸ್ಕ್ ಖರೀದಿಸಿ ವಿತರಣೆ ಮಾಡುತ್ತಿರುವುದು ವಿಶೇಷವಾಗಿದೆ.
Kshetra Samachara
25/01/2022 05:32 pm