ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಮಹತ್ವಪೂರ್ಣ ಯೋಜನೆಯಲ್ಲಿ ಒಂದಾಗಿರುವ ಬಿ.ಆರ್.ಟಿ.ಎಸ್ ಯೋಜನೆ ಒಂದಿಲ್ಲೊಂದು ರೀತಿಯಲ್ಲಿ ಸದ್ದು ಮಾಡುತ್ತಲೇ ಇದೇ.ಈಗ ಮತ್ತೊಂದು ಸದ್ದು ಮಾಡುವ ಮೂಲಕ ಗೌರವದ ಗರಿ ಮುಡಿಗೇರಿಸಿಕೊಂಡಿದೆ.
ಹುಬ್ಬಳ್ಳಿ–ಧಾರವಾಡ ಬಿಆರ್‌ಟಿಎಸ್ ಕಂಪನಿಗೆ ಸ್ಕೊಚ್ ಸಂಸ್ಥೆಯ ರಾಷ್ಟ್ರೀಯ ಮಟ್ಟದ ಸ್ವರ್ಣ ಪ್ರಶಸ್ತಿ– 2020 ದಕ್ಕಿದೆ. ಪರಿಸರ ಮತ್ತು ಸುಸ್ಥಿರತೆ ವರ್ಗದ ಅಡಿಯಲ್ಲಿ ಈ ಪ್ರಶಸ್ತಿ ದೊರೆತಿದ್ದು,ಹೊಸ ವರ್ಷದ ಆರಂಭದಲ್ಲಿಯೇ ದಾಖಲೆಗೆ ಅಡಿಪಾಯ ಹಾಕಿದೆ.
ಹಿಂದಿನ ಎರಡು ತಿಂಗಳಿನಿಂದ ನಡೆದ ರಾಷ್ಟ್ರೀಯ ಮಟ್ಟದ ಮೂರು ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ಬಿಆರ್‌ಟಿಎಸ್ ವಿವಿಧ ರಾಜ್ಯಗಳಿಂದ ಸ್ವೀಕೃತವಾದ 14 ಉತ್ತಮ ಯೋಜನೆಗಳಲ್ಲಿ ಸ್ಥಾನ ಪಡೆದಿತ್ತು. 16ರಂದು ವರ್ಚುವಲ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಡಿಮೆ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ, ಸಾರ್ವಜನಿಕರು ಖಾಸಗಿ ವಾಹನಗಳ ಅವಲಂಬನೆ ಕಡಿಮೆ ಮಾಡುವಲ್ಲಿ ಸಫಲ, ಕಡಿಮೆ ದರದಲ್ಲಿ ಗುಣಮಟ್ಟದ ಎ.ಸಿ ಬಸ್ ಸಂಚಾರ, ವಾಯುಮಾಲಿನ್ಯ ನಿಯಂತ್ರಣ, ಸಮಯ ಉಳಿತಾಯ, ಬಸ್ ನಿಲ್ದಾಣ, ಐಟಿ, ಸಿಗ್ನಲ್, ನಿಯಂತ್ರಣಾ ಕೊಠಡಿ, ರಸ್ತೆ ಮೇಲ್ಸೇತುವೆ, ಪಾದಚಾರಿ ಮೇಲ್ಸೇತುವೆ, ಪಾದಚಾರಿ ಮಾರ್ಗ ಹೀಗೆ ವಿವಿಧ ಅಂಶಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಬಿಆರ್‌ಟಿಎಸ್ ಪ್ರಕಟಣೆಯಲ್ಲಿ ತಿಳಿಸಿದೆ.
Kshetra Samachara
18/01/2021 11:05 am