ನವಲಗುಂದ : ನವಲಗುಂದ ತಾಲ್ಲೂಕಿನ ಬೆಳವಟಗಿ ಗ್ರಾಮದಲ್ಲಿ ಶನಿವಾರ ತಹಶೀಲ್ದಾರ್ ಅನೀಲ ಬಡಿಗೇರ ಅವರ ನೇತೃತ್ವದಲ್ಲಿ ಗ್ರಾಮ ವಾಸ್ತವ್ಯ ಜರುಗಿದ್ದು, ಗ್ರಾಮಸ್ಥರು ಗ್ರಾಮದಲ್ಲಿ ಅತೀ ಅವಶ್ಯಕವಾಗಿರುವ ಕಾಮಗಾರಿಗಳ ಕುರಿತು ತಹಶೀಲ್ದಾರ್ ಅವರಿಗೆ ಮನವಿಯನ್ನು ನೀಡಿದರು.
ಎಸ್... ಪ್ರತಿ ತಿಂಗಳ ಮೂರನೇ ಶನಿವಾರ ಹಮ್ಮಿಕೊಳ್ಳಲಾಗುವ ತಹಶೀಲ್ದಾರ್ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಡಿಯಲ್ಲಿ ತಹಶೀಲ್ದಾರ್ ಗ್ರಾಮ ವಾಸ್ತವ್ಯ ಇಂದು ತಾಲ್ಲೂಕಿನ ಬೆಳವಟಗಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ತಾಲೂಕಾ ಮಟ್ಟದ ಎಲ್ಲಾ ಅಧಿಕಾರಿಗಳು ಗ್ರಾಮಸ್ಥರ ಕುಂದು ಕೊರತೆಗಳನ್ನು ಆಲಿಸಿ, ಸಾಧ್ಯವಾದಷ್ಟು ಪರಿಹರಿಸುವ ಕೆಲಸವನ್ನು ಮಾಡಿದ್ದಾರೆ.
ಈ ತಿಂಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಬೆಳವಟಗಿ ಗ್ರಾಮಸ್ಥರು ಮಹದಾಯಿ ಬಗ್ಗೆ ದ್ವನಿ ಎತ್ತಿದ್ದು, ರೈತರ ಉಳಿಯುವಿಕೆಗಾಗಿ ಮಹಾದಾಯಿ ಕಳಸಾ ಬಂಡೂರಿ ನದಿ, ಮಲಪ್ರಭೆಗೆ ಜೋಡಣೆಯ ಕಾರ್ಯಾರಂಭ ಸರಕಾರ ತಕ್ಷಣವೇ ಮಾಡಬೇಕು. ಅದರೊಂದಿಗೆ ಬೆಳವಟಗಿ ಸೇರಿದಂತೆ ಅಮರಗೋಳ, ಗೊಬ್ಬರಗುಂಪಿ ಗ್ರಾಮಗಳ ರೈತರ ಹೊಲ-ಮನೆಗಳಿಗೆ ಹೋಗಿ ಬರುವ ರಸ್ತೆಗಳನ್ನು ಸರ್ವಋತು ಮಾಡಿ ಕೊಡುವದು ಹಾಗೂ ಸಿಡಿಗಳ ನಿರ್ಮಾಣ. ಬೆಳವಟಗಿ ಗ್ರಾಮದ ಸುತ್ತಲೂ ಗಟಾರಗಳ ನಿರ್ಮಾಣ ಮಾಡಿ ಗಟಾರದಲ್ಲಿ ಹರಿದು ಬಂದ ನೀರು ಬೆಣ್ಣೆ ಹಳ್ಳಕ್ಕೆ ತಲುಪುವಂತೆ ಮಾಡುವದು.
ಗ್ರಾಮದ ಒಳಗಿನ ಎಲ್ಲಾ ಓಣಿಗಳಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಿ, ಎಲ್ಲ ರಸ್ತೆಗಳನ್ನು ಸಿ.ಸಿ ರಸ್ತೆಗಳನ್ನಾಗಿ ಮಾಡುವದು. ಕೆರೆ ಸುತ್ತಲೂ ತಡೆ ಗೋಡೆ ಮಾಡಿ, ಏರಿ ಮಣ್ಣು ಹೊರಹೋಗದಂತೆ ಮಾಡುವದು ಹಾಗೂ ಗಟಾರ ನಿರ್ಮಿಸುವದು. ಸ್ಮಶಾನ ಭೂಮಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವದು, ರಸ್ತೆ ನಿರ್ಮಾಣ ಹಾಗೂ ಸಮುದಾಯ ಭವನ ನಿರ್ಮಿಸುವದು.
ರೈತರ ಅನುಕೂಲತೆಗಾಗಿ ಹೆಸರು ಖರೀದಿ ಕೇಂದ್ರ ತಕ್ಷಣವೇ ಪ್ರಾರಂಭ ಮಾಡಬೇಕು. ಪ್ರತಿ ಖಾತೆಗೆ 15 ಕ್ವಿಂಟಲ್ ಹೆಸರು ಖರೀದಿಸಬೇಕು ಹಾಗೂ ಪ್ರತಿ ಕ್ವಿಂಟಲ್ ಹೆಸರಿಗೆ 8500 ರೂ. ಗಳನ್ನು ನಿಗದಿಮಾಡಬೇಕು. ಬೆಳವಟಗಿ ಗ್ರಾಮದ ಜಾನುವಾರುಗಳ ಆರೋಗ್ಯ ಕಾಪಾಡಲು ಪಶು ಆಸ್ಪತ್ರೆ ತೆರೆಯಬೇಕು. ಬೆಳವಟಗಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಾರಂಭಿಸಬೇಕು ಸೇರಿದಂತೆ ಇನ್ನು ಹಲವು ಬೇಡಿಕೆಗಳನ್ನು ತಹಶೀಲ್ದಾರ್ ಎದುರು ಇಟ್ಟರು.
Kshetra Samachara
20/08/2022 07:59 pm