ಕುಂದಗೋಳ: ಸಂಗೀತ ದಿಗ್ಗಜ ಸವಾಯಿ ಗಂಧರ್ವರು ಸಾಧನೆ ಮೂಲಕವೇ ಹೆಸರುವಾಸಿ. ಮೂಲತಃ ಕುಂದಗೋಳದವರಾದ ಈ ಮಹಾನ್ ಸಾಧಕರ ಸ್ಮಾರಕವೀಗ ಅವ್ಯವಸ್ಥೆ ಗೂಡಾಗಿ ಸರಸ್ವತಿ ಆರಾಧಕರಿಗೆ ಕಳಂಕ ತಂದಿದೆ.
ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿ ಪಕ್ಕದ ಸವಾಯಿ ಗಂಧರ್ವರ ಸ್ಮಾರಕ ನೋಡಿದ್ರೇ ಮನಸ್ಸು ಭಾರವಾಗುತ್ತದೆ. ಯಾಕೆಂದರೆ
ಸ್ಮಾರಕ ಜಾನುವಾರು ಮೇಯುವ ಜಾಗವಾಗಿದೆ, ಕುರಿಗಾಹಿಗಳ ವಾಸಸ್ಥಳವಾಗಿದೆ. ಅಷ್ಟೇ ಅಲ್ಲದೆ, ಹಗಲು ರಾತ್ರಿ ಕುಡುಕರ ಅಡ್ಡೆಯಾಗಿ ಸ್ಮಾರಕದ ಕಿಟಕಿ- ಗ್ಲಾಸ್, ನೆಲಹಾಸು, ಮೇಲ್ಛಾವಣಿ ಕಿತ್ತು ಬಿದ್ದಿದೆ!
ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ಮೆಟ್ಟಿಲು ಕೆಳಗಿನ ಜಾಗದಲ್ಲಿ ಸಂದಿಗೊಂದು ಸಾರಾಯಿ, ಚಿಪ್ಸ್ ಪ್ಯಾಕೆಟ್, ಗ್ಲಾಸ್ ಹೀಗೆ ತ್ಯಾಜ್ಯ ತುಂಬಿ ದುರ್ನಾತ ಬೀರುತ್ತಿದ್ದು, ಸುತ್ತಲಿನ ಹಸಿರ ಉದ್ಯಾನವನ ನಿರ್ವಹಣೆ ಇಲ್ಲದೆ ಶೋಚನೀಯ ಸ್ಥಿತಿಯಲ್ಲಿದೆ.
ಈ ಹಿಂದೆ ಮಾಜಿ ಸಿಎಂ ಬಿಎಸ್ ವೈ, ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡರ ಅವರು ಸಂಗೀತ ಪ್ರೇಮಿಗಳ ಒತ್ತಾಸೆಯಂತೆ 2 ಕೋಟಿ 70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿಕೊಟ್ಟಿದ್ದ ಈ ಭವನ ಇದೀಗ ಹಾಳು ಕೊಂಪೆಯಾಗಿದೆ.
ನಿರ್ಮಿತಿ ಕೇಂದ್ರ ನಿರ್ಮಿಸಿದ ಈ ಸ್ಮಾರಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತದ ನಿರ್ವಹಣೆ ಬಳಿಕ 2015ರಲ್ಲಿ ಪಟ್ಟಣ ಪಂಚಾಯಿತಿ ಕೈ ಸೇರಿದ ಸವಾಯಿ ಗಂಧರ್ವರ ನೆನಪಿನ ಸ್ಥಳವೀಗ ಸಭೆ- ಸಮಾರಂಭ ಹೊರತುಪಡಿಸಿ ದುಶ್ಚಟ, ಅನೈತಿಕ ಚಟುವಟಿಕೆ ತಾಣವಾಗಿ ಬದಲಾಗಿರುವುದು ಮಾತ್ರ ವಿಪರ್ಯಾಸವೇ ಸರಿ.
- ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
23/07/2022 04:15 pm