ಧಾರವಾಡ: ಬೆಣ್ಣೆಹಳ್ಳ, ತುಪ್ಪರಿ ಹಳ್ಳಗಳ ಪ್ರವಾಹ ನಿಯಂತ್ರಣ ಹಾಗೂ ಪ್ರವಾಹದ ನೀರನ್ನು ಕೃಷಿಗೆ ಸದುಪಯೋಗಪಡಿಸುವ ಯೋಜನಾ ವರದಿಯ ಕುರಿತು ಶುಕ್ರವಾರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ನೇತೃತ್ವದಲ್ಲಿ ಬೆಂಗಳೂರಿನ ನೀರಾವರಿ ನಿಗಮದ ಕಚೇರಿಯಲ್ಲಿ ಸಭೆ ಜರುಗಿತು.
ಧಾರವಾಡ ಜಿಲ್ಲೆಯ ಪ್ರಮುಖ ಬೆಣ್ಣೆಹಳ್ಳ ಮತ್ತು ತುಪ್ಪರಿ ಹಳ್ಳಗಳು ಮಳೆಗಾಲದ ಸಮಯದಲ್ಲಿ ತುಂಬಿ ಹರಿಯುತ್ತವೆ. ಜೊತೆಗೆ ಪ್ರವಾಹದ ನೀರಿನಿಂದಾಗಿ ಸುತ್ತಮುತ್ತಲಿನ ಕೃಷಿ ಜಮೀನುಗಳಿಗೆ ಹಾನಿ ಉಂಟಾಗುತ್ತಿದ್ದು, ಅದು ಅಪಾರ ಪ್ರಮಾಣದ ಬೆಳೆ ಹಾನಿಗೂ ಕಾರಣವಾಗುತ್ತಿದೆ. ಪ್ರತಿವರ್ಷ ಬೆಣ್ಣೆಹಳ್ಳ ಮತ್ತು ತುಪ್ಪರಿ ಹಳ್ಳದ ನೀರು ಅನಾವಶ್ಯಕವಾಗಿ ಹರಿದು ಹೋಗುತ್ತಿದೆ.
ಹಲವು ತಿಂಗಳುಗಳ ಹಿಂದೆ ಹಳ್ಳಗಳ ಅಭಿವೃದ್ಧಿಯ ಸಲುವಾಗಿ ಸರ್ವೆ ಕಾರ್ಯ ಮಾಡಲಾಗಿದೆ. ಹಳ್ಳದ ನೀರನ್ನು ರೈತರ ಕೃಷಿ ಭೂಮಿಗೆ ಸದುಪಯೋಗ ಪಡಿಸಿಕೊಳ್ಳಲು ಉತ್ತಮ ಯೋಜನೆ ಸಿದ್ಧಪಡಸಬೇಕು ಎಂದು ನೀರಾವರಿ ನಿಗಮದ ಅಧಿಕಾರಿಗಳಿಗೆ ಸಚಿವ ಜೋಶಿಯವರು ಸೂಚನೆ ನೀಡಿದರು.
ಇದೇ ವೇಳೆ ಧಾರವಾಡ ಗ್ರಾಮೀಣ ಶಾಸಕರಾದ ಅಮೃತ ದೇಸಾಯಿಯವರು, ಬೆಣ್ಣೆ-ತುಪ್ಪರಿ ಹಳ್ಳದ ಯೋಜನಾ ವರದಿಯ ಬಗ್ಗೆ ಅಧಿಕಾರಿಗಳಿಗೆ ಕೆಲವು ಸಲಹೆ, ಸೂಚನೆಗಳನ್ನು ನೀಡಿದರು.
ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ಅರವಿಂದ ಬೆಲ್ಲದ ಹಾಗೂ ಅಧಿಕಾರಿಗಳು ಇದ್ದರು.
Kshetra Samachara
25/09/2020 07:24 pm