ಪಬ್ಲಿಕ್ ನೆಕ್ಸ್ಟ್ ವಿಶೇಷ
ನವಲಗುಂದ : ಈ ಬಾರಿಯ ಪ್ರವಾಹಕ್ಕೆ ನವಲಗುಂದ ಭಾಗದ ಜನರು ತತ್ತರಿಸಿದ್ದಾರೆ. ಹಲವೆಡೆ ಮನೆಗಳು ನೆಲಕ್ಕಚ್ಚಿವೆ. ಮನುಷ್ಯರು ಮಾತ್ರವಲ್ಲದೆ ಪ್ರಾಣಿ, ಪಕ್ಷಿಗಳು ಸಂಕಷ್ಟವನ್ನು ಎದುರಿಸುವಂತಾಗಿದೆ.
ಇನ್ನು ತಹಶೀಲ್ದಾರ್, ಗ್ರಾಮ ಲೆಕ್ಕಾಧಿಕಾರಿ, ಪೋಲಿಸ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಖನ್ನೂರ ಗ್ರಾಮದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಒಂದೇ ಕುಟುಂಬದ ಮೂವರನ್ನು ರಕ್ಷಣೆ ಮಾಡಿದ್ದಾರೆ. ಖನ್ನೂರ-ಶಲವಡಿ ಗ್ರಾಮಗಳ ಮಧ್ಯದ ಸೇತುವೆಗೆ ಹೊಂದಿಕೊಂಡಿರುವ ರಸ್ತೆ ಕುಸಿದು, ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯನ್ನು ರಕ್ಷಿಸಲಾಗಿದೆ..
ಸೆಪ್ಟೆಂಬರ್ 6 ಹಾಗೂ 7 ನೇ ತಾರೀಖು ಒಟ್ಟು 126 ಮನೆಗಳು ನೆಲಕ್ಕಚ್ಚಿದ್ದು, 14 ಕುರಿಗಳು ಹಾಗೂ 1 ಆಕಳ ಕರು ಸಾವನ್ನಪ್ಪಿದೆ. ಸಂತ್ರಸ್ತರಿಗಾಗಿ ಈಗಾಗಲೇ ತಾಲ್ಲೂಕಿನ ಭೋಗನೂರ, ಪಡೆಸೂರ ಹಾಗೂ ಅರೆಕುರಹಟ್ಟಿ ಗ್ರಾಮಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ನೂರಾರು ಎಕರೆ ಜಮೀನು ಜಲಾವೃತಗೊಂಡು ಬೆಳೆ ಹಾನಿಯಾಗಿದೆ.
ಮನೆಗಳಲ್ಲಿ ಶೇಖರಿಸಿಟ್ಟ ಧಾನ್ಯಗಳು ನೀರು ಪಾಲಾಗಿದೆ. ಮಳೆಯ ಹೊಡೆತಕ್ಕೆ ಮನೆಗಳು ಧರೆಗುರುಳಿವೆ. ಅತಿವೃಷ್ಟಿ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡ, ಸಚಿವರು, ರಾಜಕೀಯ ಮುಖಂಡರು, ಜಿಲ್ಲಾಧಿಕಾರಿಗಳು ಭೇಟಿ ನೀಡಿ, ಪರಿಹಾರ ನೀಡುವುದಾಗಿ ಭರವಸೆ ಸಹ ನೀಡಿದ್ದಾರೆ. ಆದ್ರೆ ಸಂತ್ರಸ್ತರಿಗೆ ಪರಿಹಾರ ಯಾವಾಗ ಸಿಗುತ್ತೆ ಅನ್ನೋದೆ ಯಕ್ಷ ಪ್ರಶ್ನೆಯಾಗಿ ಉಳಿದಿದೆ.
ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ
Kshetra Samachara
09/09/2022 03:12 pm