ಧಾರವಾಡ: ನವರಾತ್ರಿ ಹಬ್ಬದ ಅಂಗವಾಗಿ ಶ್ರೀ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆಗೆ ಅಬಕಾರಿ ಇಲಾಖೆ ಅಧಿಕಾರಿ ಶಾರದಾ ಕೋಲಕರ ವಿರೋಧ ವ್ಯಕ್ತಪಡಿಸಿದ್ದಲ್ಲದೇ ಪೆಂಡಾಲ್‌ನಲ್ಲಿರುವ ಹಚ್ಚಲಾಗಿದ್ದ ಸೌಂಡ್ ಸಿಸ್ಟಮ್‌ನ್ನು ಕಿತ್ತೊಗೆದು ಹಬ್ಬದ ಆಚರಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಆರೋಪಿಸಿ ಶಾರದಾ ಅವರ ವಿರುದ್ಧ ಸಾರ್ವಜನಿಕರು ಧಾರವಾಡ ಉಪನಗರ ಠಾಣೆ ಮೆಟ್ಟಿಲೇರಿದ್ದಾರೆ.
ಧಾರವಾಡದ ರಾಜ್ ನಗರದಲ್ಲಿ ಒಂಬತ್ತು ದಿನಗಳ ಕಾಲ ಶ್ರೀದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈ ವರ್ಷವೂ ಮೂರ್ತಿ ಪ್ರತಿಷ್ಠಾಪನೆ ಮಾಡಿ, ಪೆಂಡಾಲ್‌ನಲ್ಲಿ ಸೌಂಡ್ ಬಾಕ್ಸ್‌ಗಳನ್ನು ಹಚ್ಚಲಾಗಿತ್ತು. ಅದೇ ಏರಿಯಾದಲ್ಲೇ ಮನೆ ಹೊಂದಿದ್ದ ಅಬಕಾರಿ ಇಲಾಖೆ ಅಧಿಕಾರಿ ಶಾರದಾ ಕೋಲಕರ, ಮಂಗಳವಾರ ಏಕಾಏಕಿ ಪೆಂಡಾಲ್‌ಗೆ ನುಗ್ಗಿ ಸೌಂಡ್ ಬಾಕ್ಸ್‌ಗಳಿಂದ ನಮಗೆ ಕಿರಿಕಿರಿಯಾಗುತ್ತಿದೆ ಎಂದು ಸೌಂಡ್ ಬಾಕ್ಸ್ ವೈರ್‌ಗಳನ್ನು ಕಿತ್ತೊಗೆದು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಅಲ್ಲಿನ ನಿವಾಸಿಗಳು ಹಾಗೂ ಶ್ರೀದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಯುವಕರು ಧಾರವಾಡ ಉಪನಗರ ಠಾಣೆಗೆ ಬಂದು ಶಾರದಾ ವಿರುದ್ಧ ದೂರು ನೀಡಿದ್ದಾರೆ.
ಆ ಏರಿಯಾದಲ್ಲಿ ನಾವು ಶ್ರೀದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಕ್ಕೆ ಯಾರಿಗೂ ಕಿರಿಕಿರಿಯಾಗಿಲ್ಲ. ಆದರೆ, ಶಾರದಾ ಅವರಿಗೊಬ್ಬರಿಗೇ ಕಿರಿಕಿರಿಯಾಗುತ್ತಿದೆಯಂತೆ. ಉಡಿ ತುಂಬುವ ಕಾರ್ಯಕ್ರಮಕ್ಕೂ ಶಾರದಾ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಶಕುಂತಲಾ ಎಂಬವರು ಆರೋಪಿಸಿದರು.
ಒಟ್ಟಾರೆ ಅಬಕಾರಿ ಇಲಾಖೆ ಅಧಿಕಾರಿ ಶಾರದಾ ಕೋಲಕರ ಅವರು, ಹಿಂದೂ ಧರ್ಮದ ಆಚರಣೆಗೆ ವಿರೋಧ ವ್ಯಕ್ತಪಡಿಸಿದ್ದು, ಪೆಂಡಾಲ್‌ಗೆ ನುಗ್ಗಿ ಸೌಂಡ್ ಬಾಕ್ಸ್‌ಗಳ ವೈರ್ ಕಿತ್ತೊಗೆದು ದರ್ಪ ತೋರಿದ್ದಾರೆ. ಅವರ ಮೇಲೆ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಅಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.
Kshetra Samachara
04/10/2022 08:32 pm