ಹುಬ್ಬಳ್ಳಿ: ಇದು ಕಾರ್ಮಿಕರ ಹಣದಲ್ಲೇ ನಡೆಯುವ, ಕಾರ್ಮಿಕರ ಆರೋಗ್ಯ ಕಾಪಾಡಲೆಂದೇ ಇರುವ ಆಸ್ಪತ್ರೆ. ಆದರೆ ಇಲ್ಲಿಗೆ ಬರುವ ರೋಗಿಗಳು ಚಿಕಿತ್ಸೆಗಾಗಿ ನಡೆಸಬೇಕಾದ ಅಲೆದಾಟದಲ್ಲೇ ಸುಸ್ತಾಗುತ್ತಾರೆ. ಅಷ್ಟಕ್ಕೂ ಇದು ನಗರದಲ್ಲಿರುವ ಇಎಸ್‌ಐ ಆಸ್ಪತ್ರೆಗಳ ಸ್ಥಿತಿ.
ಹೌದು. ಕಾರ್ಮಿಕರ ರಾಜ್ಯ ವಿಮಾ ನಿಗಮ ನಿರ್ವಹಣೆ ಮಾಡುತ್ತಿರುವ ಕಮರಿಪೇಟೆಯಲ್ಲಿ ಕರಾವಿ ಚಿಕಿತ್ಸಾಲಯ- ನಂ 1 ಆಸ್ಪತ್ರೆ ಇದೆ. ಈ ಆಸ್ಪತ್ರೆ ಒಳ ಹೊಕ್ಕರೆ ಏಳುಸುತ್ತಿನ ಕೋಟೆಯಲ್ಲಿ ಸುತ್ತಾಡಿದ ಅನುಭವವಾಗುತ್ತದೆ. ರೋಗಿಗಳು, ಅವರ ಸಂಬಂಧಿಕರು ದಾಖಲೆ ಪತ್ರಗಳನ್ನು ಹಿಡಿದು, ಅತ್ತಿಂದಿತ್ತ ಅಲೆದಾಡುವ ದೃಶ್ಯಗಳು ಮಾಮೂಲು.
ನಗರದ ಹಲವೆಡೆ ಇಎಸ್‌ಐ ಆಸ್ಪತ್ರೆಗಳಿವೆ, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಕಾರವಾರ ರಸ್ತೆಯಲ್ಲಿನ ಮಾದರಿ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಅದಕ್ಕೂ ಮುಂಚೆ ಸ್ಥಳೀಯ ಇಎಸ್ಐ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಬೇಕು. ಹೀಗಾಗಿ ಚಿಕಿತ್ಸೆ ಪಡೆಯಲು ರೋಗಿಗಳನ್ನು ನೋಂದಾಯಿಸಲು, ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕರೆದೊಯ್ಯಲು ಬೇಕಿರುವ ಅನುಮತಿ ಪಡೆಯಲು ಅಲೆದಾಡಿಯೇ ಕಾರ್ಮಿಕರು ಹೈರಾಣಾಗುತ್ತಾರೆ. ಇಲ್ಲಿ ಮೂಲಭೂತ ಸೌಕರ್ಯಗಳು ಕೂಡ ಇಲ್ಲ.
ಇನ್ನು ಕಾರ್ಮಿಕರ ವೇತನದಿಂದ ಇಎಸ್‌ಐ ಸೌಲಭ್ಯ ಪಡೆದುಕೊಳ್ಳಲು ತಿಂಗಳಿಗೆ 1 ಸಾವಿರ ಕಡಿತಗೊಳ್ಳುತ್ತದೆ. ಅದೇ ಹಣದಲ್ಲಿ ನಡೆಯುವ ಆಸ್ಪತ್ರೆಯಲ್ಲಿ ಸೌಲಭ್ಯಗಳನ್ನು ಪಡೆಯಲು ನಾವು ಪರದಾಡಬೇಕಿದೆ ಎಂದು ಚಿಕಿತ್ಸೆ ಬಂದ ರೋಗಿ ಮತ್ತು ಮತ್ತವರ ಸಂಬಂಧಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಪೌರ ಕಾರ್ಮಿಕರು, ವಲಸೆ ಕಾರ್ಮಿಕರು ಸೇರಿದಂತೆ ಅನಕ್ಷರಸ್ಥರೂ ಚಿಕಿತ್ಸೆಗಾಗಿ ಇಲ್ಲಿಗೆ ಬರುತ್ತಾರೆ. ದಾಖಲೆಗಳಲ್ಲಿ ಸಣ್ಣಪುಟ್ಟ ಲೋಪವಿದ್ದರೆ, ಇನಿಷಿಯಲ್ ಬಿಟ್ಟು ಹೋಗಿದ್ದರೆ ಅದನ್ನೇ ದೊಡ್ಡದು ಮಾಡಿ ಚಿಕಿತ್ಸೆ ನಿರಾಕರಿಸಲಾಗುತ್ತದೆ. ಈ ಎಲ್ಲ ಸಮಸ್ಯೆಗಳಿಂದ ಬೇಸತ್ತಿರುವ ಕಾರ್ಮಿಕರು ಇಎಸ್‌ಐ ಸೌಲಭ್ಯವೂ ಬೇಡ, ವೇತನದಲ್ಲಿ ಕಡಿತ ಆಗುವುದು ಬೇಡ ಎನ್ನುತ್ತಿದ್ದಾರೆ.
-ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ....
Kshetra Samachara
04/10/2022 11:53 am