ಹುಬ್ಬಳ್ಳಿ: ಇಲ್ಲಿನ ಹೊಸ ನ್ಯಾಯಾಲಯದಲ್ಲಿಂದು ಕಾರ್ಮಿಕ ಇಲಾಖೆಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಅನುದಾನದಲ್ಲಿ ಸ್ಕೊಡ್ ವೆಸ್ ಸಂಸ್ಥೆ ಸಹಯೋಗದಲ್ಲಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ಉಚಿತ ಆರೋಗ್ಯ ಸೇವೆ ಒದಗಿಸುವ ಶ್ರಮಿಕ್ ಸಂಜೀವಿನಿ ಸಂಚಾರಿ ಚಿಕಿತ್ಸಾ ಘಟಕ ವಾಹನಕ್ಕೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪರಮೇಶ್ವರ ಪ್ರಸನ್ನ, ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಆರ್.ಎಸ್. ಚಿನ್ನಣ್ಣವರ, ಸದಸ್ಯ ಕಾರ್ಯದರ್ಶಿ ರಾಜಶೇಖರ ತಿಳಗಂಜಿ ಮತ್ತು ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷರಾದ ಸಿ.ಆರ್. ಪಾಟೀಲ್ ಚಾಲನೆ ನೀಡಿದರು.
ನಂತರ ಕಾರ್ಮಿಕ ಅಧಿಕಾರಿ ಮಲ್ಲಿಕಾರ್ಜುನ ಜೋಗುರ ಮಾತನಾಡಿ, ಕಟ್ಟಡ ಕಾರ್ಮಿಕರು ಹಾಗೂ ಅವರ ಕುಟುಂಬಸ್ಥರಿಗೆ ಉಚಿತ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಕಾರ್ಮಿಕ ಇಲಾಖೆಯಿಂದ ಶ್ರಮಿಕ ಸಂಜೀವಿನಿ ಸಂಚಾರಿ ಚಿಕಿತ್ಸಾ ಘಟಕ ವಾಹನವನ್ನು ಆರಂಭಿಸಲಾಗಿದೆ. ಈಗಾಗಲೇ ನೋಂದಣಿ ಮಾಡಿಕೊಂಡಿರುವ ಕಾರ್ಮಿಕರು ಹಾಗೂ ಹೊಸದಾಗಿ ನೋಂದಣಿ ಮಾಡಿಸಿಕೊಂಡಿರುವ ಜಿಲ್ಲೆಯ 15 ಸಾವಿರ ಕಾರ್ಮಿಕರಿಗೆ ಉಚಿತ ಆರೋಗ್ಯ ಸೇವೆ ದೊರೆಯಲಿದೆ. ಈ ವಾಹನವು ಇಸಿಜಿ, ಕೋವಿಡ್ 19 ಪರೀಕ್ಷೆ, ಪ್ರಯೋಗಾಲಯ ಪರೀಕ್ಷೆ ಹಾಗೂ ಇಲಾಖೆ ನಿರ್ದೇಶಿತ ಇತರೆ ಆರೋಗ್ಯ ಸೇವೆಗಳನ್ನು ನೀಡಲಿದೆ ಎಂದರು.
Kshetra Samachara
14/09/2022 12:40 pm