ಧಾರವಾಡ: ಸ್ವಾಧೀನಪಡಿಸಿಕೊಂಡ ಜಮೀನಿಗೆ ನ್ಯಾಯಾಲಯದ ಆದೇಶದಂತೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಧಾರವಾಡದ ಜಲಮಂಡಳಿಯ ಕಚೇರಿಯಲ್ಲಿನ ವಸ್ತುಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ಇಂದು ಜಪ್ತಿ ಮಾಡಲಾಗಿದೆ.
ನವಲಗುಂದ ತಾಲೂಕಿನ ಅಮರಗೋಳದ ವಿರುಪಾಕ್ಷಪ್ಪ ಕೊಳ್ಳಿ ಹಾಗೂ ನಾಗವ್ವ ಕೇರಿ ಎಂಬುವವರಿಗೆ ಸೇರಿದ 6 ಎಕರೆ 30 ಗುಂಟೆ ಜಮೀನನ್ನು 2012ರಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಸ್ವಾಧೀನಪಡಿಸಿಕೊಂಡಿತ್ತು. ಆಗ ಇವರಿಗೆ 78 ಲಕ್ಷ ರೂಪಾಯಿ ಪರಿಹಾರ ನೀಡಲಾಗಿತ್ತು.
ಆದರೆ, ಈ ಪರಿಹಾರ ಕಡಿಮೆಯಾಗಿದೆ ಎಂದು ರೈತರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಧಾರವಾಡದ ಎರಡನೇ ಹೆಚ್ಚುವರಿ ನ್ಯಾಯಾಲಯವು ರೈತರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ, ಜಮೀನು ಸ್ವಾಧೀನಕ್ಕೊಳಪಟ್ಟ ರೈತರಿಗೆ 2.65 ಕೋಟಿ ಪರಿಹಾರ ನೀಡಬೇಕು ಎಂದು ಕಳೆದ ವರ್ಷವೇ ಆದೇಶ ನೀಡಿತ್ತು.
ಆದೇಶವಾದ ಒಂದು ವರ್ಷದ ಬಳಿಕವೂ ಪರಿಹಾರ ನೀಡದ ಹಿನ್ನೆಲೆಯಲ್ಲಿ ಜಲಮಂಡಳಿಯಲ್ಲಿನ ಕಂಪ್ಯೂಟರ್, ಪ್ರಿಂಟರ್, ಖುರ್ಚಿ ಸೇರಿದಂತೆ ಇತ್ಯಾದಿ ವಸ್ತುಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ಜಪ್ತಿ ಮಾಡಲಾಗಿದೆ.
Kshetra Samachara
13/09/2022 03:31 pm