ಹುಬ್ಬಳ್ಳಿ: ಮಳೆಯಾದರೇ ಸಾಕು ರಸ್ತೆ ಯಾವುದು? ಗುಂಡಿ ಯಾವುದು? ಎಂಬ ಆತಂಕದಲ್ಲಿಯೇ ವಾಹನ ಸವಾರರು ನಿತ್ಯ ನರಕ ಅನುಭವಿಸುವ ದುಸ್ಥಿತಿ ಎದುರಾಗಿದೆ. ರಸ್ತೆ ಅವ್ಯವಸ್ಥೆ ಖಂಡಿಸಿ ಜನತೆ, ಪಾಲಿಕೆ ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ವಾಣಿಜ್ಯ ನಗರಿ ಹುಬ್ಬಳ್ಳಿ ಸ್ಮಾರ್ಟ್ ಸಿಟಿ ಅಷ್ಟೇ ಅಲ್ಲದೆ, ರಾಜ್ಯದ 2ನೇ ರಾಜಧಾನಿ ಎಂದೇ ಬಿಂಬಿತ. ಆದರೆ, ಈ ನಗರದಲ್ಲಿ ಇದೀಗ ಎಲ್ಲಿ ನೋಡಿದರೂ ಗುಂಡಿಗಳು! ಹುಬ್ಬಳ್ಳಿ ಬಸವನ ಹತ್ತಿರದ ರಸ್ತೆ ಸೇರಿದಂತೆ ನಗರದ ವಿವಿಧೆಡೆ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ಅಂಗೈಯಲ್ಲಿ ಜೀವ ಹಿಡಿದುಕೊಂಡು ಸಂಚರಿಸಬೇಕಾಗಿದೆ.
ಇದೇ ರಸ್ತೆಯಲ್ಲಿಯೇ ಆಸ್ಪತ್ರೆಗಳು ಇದ್ದು ರೋಗಿಗಳು, ಗರ್ಭಿಣಿಯರು ವಾಹನದಲ್ಲಿ ಸಾಗುವಾಗ ಅವರ ಪರಿಸ್ಥಿತಿ ದೇವರಿಗೆ ಪ್ರೀತಿ ಎನ್ನುವಂತಾಗಿದೆ. ಜನಪ್ರತಿನಿಧಿಗಳು ಅಭಿವೃದ್ಧಿ ಹೆಸರಿನಲ್ಲಿ ಕೊಳ್ಳೆ ಹೊಡೆಯುತ್ತಿದ್ದಾರೆ. ಅವಳಿ ನಗರದ ಅಭಿವೃದ್ಧಿ ಚಿಂತೆ ಅವರಿಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಒಟ್ಟಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ 500 ರಿಂದ 600 ಕೋಟಿ ಅನುದಾನದಲ್ಲಿ ಕೆಲಸವಾಗುತ್ತಿದೆ. ರಸ್ತೆ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ನಡಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಾಕಷ್ಟು ಅನುದಾನ ನುಂಗಿ ನೀರು ಕುಡಿದಿದೆ ಎಂಬುದನ್ನು ಕೇಳುತ್ತಿದ್ದೇವೆ. ಹಾಗಾದರೆ, ಅದೆಲ್ಲಾ ಎಲ್ಲಿ ಹೋಯ್ತು ಎಂಬ ಪ್ರಶ್ನೆ ಬಂದಾಗ ರಸ್ತೆಯಲ್ಲಿನ ಗುಂಡಿಗಳು ನುಂಗಿದವಾ? ಪಾಲಿಕೆಯವರು ನುಂಗಿದರಾ ಅಥವಾ ಜನಪ್ರತಿನಿಧಿಗಳು ನುಂಗಿದರಾ? ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
15/07/2022 03:55 pm