ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ
ಧಾರವಾಡ: ಧಾರವಾಡ ವಿದ್ಯಾಕಾಶಿ. ಸಹಜವಾಗಿಯೇ ಇಲ್ಲಿಗೆ ಬೇರೆ ಬೇರೆ ಜಿಲ್ಲೆಗಳಿಂದ ಓದಲು ವಿದ್ಯಾರ್ಥಿಗಳು ಬರುತ್ತಾರೆ. ಇವರಿಗಾಗಿಯೇ ಧಾರವಾಡದಲ್ಲಿ ಪೇಯಿಂಗ್ ಗೆಸ್ಟ್‌ಗಳೂ ಇವೆ. ಆದರೆ, ಕೆಲವು ವರ್ಷಗಳಿಂದ ಈಚೆಗೆ ಈ ಪಿ.ಜಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗಾಗಿ ನಾಯಿ ಕೊಡೆಗಳಂತೆ ಹುಟ್ಟಿಕೊಂಡಿರುವ ಪಿಜಿಗಳ ಮೇಲೆ ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ನೋಟಿಸ್ ಜಾರಿ ಮಾಡಿ ಅವುಗಳ ಮೇಲೆ ಕ್ರಮಕ್ಕೆ ಮುಂದಾಗಿದೆ.
ಇತ್ತೀಚೆಗೆ ಇಲ್ಲಿ ಕೋಚಿಂಗ್ ಕೇಂದ್ರಗಳ ಸಂಖ್ಯೆಯೂ ಸಾಕಷ್ಟು ಬೆಳೆದಿವೆ. ಅದಕ್ಕೆ ಪೂರಕವಾಗಿ ಗಲ್ಲಿ ಗಲ್ಲಿಯಲ್ಲಿಯೂ ಈಗ ಪಿ.ಜಿಗಳ ಅಬ್ಬರ ಜೋರಾಗಿದೆ. ಧಾರವಾಡ ನಗರ ಒಂದರಲ್ಲೇ ಸುಮಾರು 1500-2000 ಸಾವಿರ ಪಿ.ಜಿಗಳು ಹುಟ್ಟಿಕೊಂಡಿದ್ದು, ಅದರಲ್ಲಿ ಶೇ.80 ರಷ್ಟು ಪಿ.ಜಿಗಳು ಅನಧಿಕೃತವಾಗಿವೆ ಎಂಬ ಅಂಶ ಗೊತ್ತಾಗಿದೆ.
ಶೇ.80 ರಷ್ಟು ಪಿಜಿಗಳು ಪಾಲಿಕೆಗೆ ಕಮರ್ಷಿಯಲ್ ಟ್ಯಾಕ್ಸ್ ಕಟ್ಟಬೇಕು. ಆದರೆ, ಗಲ್ಲಿ ಗಲ್ಲಿಯಲ್ಲಿ ಹುಟ್ಟಿಕೊಂಡಿರುವ ಪಿ.ಜಿಗಳು ರೆಸಿಡೆನ್ಸಿಯಲ್‌ನಿಂದ ಕಮರ್ಷಿಯಲ್ ಆಗಿ ಪರಿವರ್ತನೆಗೊಂಡಿವೆ. ಹೀಗಾಗಿ ಈಗಾಗಲೇ ಮಹಾನಗರ ಪಾಲಿಕೆ ಅನಧಿಕೃತ ಪಿ.ಜಿಗಳ ಬಗ್ಗೆ ಸರ್ವೆ ಮಾಡಿಸಿ, ಅವುಗಳಿಗೆ ನೋಟಿಸ್ ಜಾರಿ ಮಾಡಿದೆ. ಒಂದು ಕಾಲಕ್ಕೆ ಎಲ್ಲೋ ನಿಂತು ಒಂದು ಕಲ್ಲು ಎಸೆದ್ರೆ ಅದು ಯಾವುದಾದ್ರೂ ಸಾಹಿತಿ ಮನೆ ಮೇಲೆ ಹೋಗಿ ಬಿಳುತ್ತೆ ಅನ್ನೋ ಮಾತು ಚಾಲ್ತಿಯಲ್ಲಿತ್ತು. ಆದ್ರೀಗ ಅದು ಬದಲಾಗಿದೆ. ಈಗ ಎಲ್ಲೋ ನಿಂತು ಕಲ್ಲು ಎಸೆದ್ರೆ ಅದೊಂದು ಕೋಚಿಂಗ್ ಕೇಂದ್ರ ಇಲ್ಲವೋ ಪಿ.ಜಿ ಮೇಲೆ ಹೋಗಿ ಬೀಳುತ್ತೆ ಅನ್ನೋ ಮಾತು ಚಾಲ್ತಿಗೆ ಬಂದಿದೆ. ಐಎಎಸ್, ಕೆಎಎಸ್, ಪೊಲೀಸ್ ನೇಮಕಾತಿಯಿಂದ ಹಿಡಿದು ರಾಜ್ಯ ಮತ್ತು ಕೇಂದ್ರ ಸರ್ಕಾರ ಮಟ್ಟದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್ ಕೇಂದ್ರಗಳು ಧಾರವಾಡದಲ್ಲಿವೆ. ಇದಕ್ಕೆ ಪೂರಕವಾಗಿ ಪಿ.ಜಿಗಳೂ ಹುಟ್ಟಿಕೊಂಡಿವೆ. ಬಹುತೇಕ ಕಡೆ ವಾಸದ ಮನೆಗಳನ್ನೇ ಪಿ.ಜಿಗಳನ್ನಾಗಿ ಮಾಡಿದ್ದು, ಇವುಗಳಿಗೆ ಯಾವುದೇ ತೆರಿಗೆಯೂ ಇಲ್ಲ. ಇದನ್ನು ಮನಗಂಡ ಮಹಾನಗರ ಪಾಲಿಕೆ ಈಗ ನೋಟಿಸ್ ಜಾರಿ ಮಾಡಿದೆ.
ಪಾಲಿಕೆ ಅಧಿಕಾರಿಗಳು ನೋಟಿಸ್ ನೀಡಲು ಮುಂದಾಗಿದ್ದು ಸ್ವಾಗಾರ್ತ, ಆದ್ರೆ ಪಿ.ಜಿಗಳ ಆರಂಭಕ್ಕೆ ಮಾನದಂಡ ಏನು ಎಂಬುದು ಪಿಜಿ ಮಾಲೀಕರ ಪ್ರಶ್ನೆಯಾಗಿದೆ.
ಧಾರವಾಡದಲ್ಲಿ ಅನೇಕ ಪ್ರತಿಷ್ಠಿತ ಕಾಲೇಜ್‌ಗಳಿದ್ದು, ಇಲ್ಲಿಗೆ ಬೇರೆ ಜಿಲ್ಲೆಯವರೂ ಕಲಿಯಲು ಬರುತ್ತಾರೆ. ಆದ್ರೆ ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಹಾಸ್ಟೆಲ್ ಲಭ್ಯತೆ ಇಲ್ಲದಿರುವುದರಿಂದ ಎಲ್ಲರೂ ಪಿ.ಜಿಗಳನ್ನೇ ಅವಲಂಬಿಸುವಂತಾಗಿದೆ.
-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
Kshetra Samachara
29/06/2022 03:54 pm