ಹುಬ್ಬಳ್ಳಿ: ಅದು ರಾಜ್ಯದ 2ನೇ ಮಹಾನಗರ. ಆ ನಗರ ಈಗಾಗಲೇ ವಾಯು ಮಾಲಿನ್ಯದಲ್ಲಿ ಅಗ್ರಸ್ಥಾನಕ್ಕೆ ಏರಿದೆ. ಹೀಗಿದ್ದರೂ ಸಾರಿಗೆ ಸಂಸ್ಥೆ ಮತ್ತಷ್ಟು ಅವೈಜ್ಞಾನಿಕ ನಿರ್ಧಾರದ ಮೂಲಕ ಸಾರ್ವಜನಿಕರ ಜೀವನದ ಜೊತೆಗೆ ಆಟ ಆಡಲು ನಿರ್ಧರಿಸಿದೆ! ಅಷ್ಟಕ್ಕೂ ಏನು ಆ ನಿರ್ಧಾರ ಅಂತೀರಾ... ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್.
ವಾಯವ್ಯ ಸಾರಿಗೆಗೆ ಬಿಎಂಟಿಸಿ ಗುಜರಿ ಬಸ್ ಬರಲಿವೆ. ಬೆಂಗಳೂರಲ್ಲಿ ಓಡಿಸಿ ಬಿಟ್ಟಿರುವ 100 ಬಸ್ ಖರೀದಿಗೆ ನಿರ್ಧಾರ ಮಾಡಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೂರಾರು ಬಸ್‌ಗಳನ್ನು ಗುಜರಿಗೆ ಹಾಕಲು ನಿರ್ಧರಿಸಿದ್ದು, ಬಹುತೇಕ ಎಲ್ಲವೂ ಲಕ್ಷಗಟ್ಟಲೇ ಕಿಮೀ ಓಡಾಡಿದ ಬಸ್‌ಗಳಾಗಿವೆ. ಈ ಬಸ್‌ಗಳು ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂದೇ ಗುಜರಿಗೆ ಹಾಕಲು ಬಿಎಂಟಿಸಿ ನಿರ್ಧರಿಸಿದೆ. ವಾಯವ್ಯ ಸಾರಿಗೆ ವ್ಯಾಪ್ತಿಯಲ್ಲಿ ಚಿಕ್ಕೋಡಿ, ಬೆಳಗಾವಿ, ಹಾವೇರಿ, ಬಾಗಲಕೋಟೆ, ಗದಗ, ಉತ್ತರ ಕನ್ನಡ, ಹುಬ್ಬಳ್ಳಿ-ಧಾರವಾಡ ನಗರ, ಧಾರವಾಡ ಗ್ರಾಮಾಂತರ, ಹುಬ್ಬಳ್ಳಿ ಗ್ರಾಮಾಂತರ ಹೀಗೆ 6 ಜಿಲ್ಲೆಗಳ 9 ವಿಭಾಗ ಬರುತ್ತವೆ. 4 ಸಾವಿರಕ್ಕೂ ಅಧಿಕ ಬಸ್‌ಗಳು ಸದ್ಯ ಸಂಚರಿಸುತ್ತಿವೆ. ಆದ್ರೂ ಸಂಸ್ಥೆ ವ್ಯಾಪ್ತಿಯಲ್ಲಿ ಸಮರ್ಪಕ ಬಸ್ ಸೇವೆ ಲಭ್ಯವಾಗುತ್ತಿಲ್ಲ. ಇದೀಗ ಹೊಸ ಬಸ್ ಖರೀದಿಸಲು ಸಂಸ್ಥೆಗೆ ಶಕ್ತಿ ಇಲ್ಲವಂತೆ!
ಉತ್ತರ ಕರ್ನಾಟಕದಲ್ಲಿ ಮೊದಲೇ ರಸ್ತೆ ಸರಿಯಿಲ್ಲ. ಇನ್ನೂ ಬಿಎಂಟಿಸಿಯಲ್ಲಿ ಬಳಸಿ ರುವ ಗುಜರಿ ಬಸ್‌ಗಳನ್ನು ಇಲ್ಲಿಗೆ ತಂದರೆ ಪ್ರಯೋಜನವೇನು? ನಮಗೇಕೆ ಈ ಶಿಕ್ಷೆ ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಒಂದು ವೇಳೆ ಸಂಸ್ಥೆಯಲ್ಲಿ ಹೊಸ ಬಸ್ ಖರೀದಿಸಲು ದುಡ್ಡು ಇಲ್ಲದಿದ್ದಲ್ಲಿ ಸರ್ಕಾರವೇ ವಿಶೇಷ ಅನುದಾನ ಕೊಡಿಸುವ ವ್ಯವಸ್ಥೆ ಮಾಡಲಿ. ಅದು ಬಿಟ್ಟು ಅಲ್ಲಿನ ಗುಜರಿ ಬಸ್ ತಂದು ಇಲ್ಲಿ ಓಡಿಸುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಭಾಗದವರೇ ಮುಖ್ಯ ಮಂತ್ರಿಯಾಗಿದ್ದಾರೆ. ಇದನ್ನು ಗಮನಿಸಿ ಹೊಸ ಬಸ್ ಗಳನ್ನೇ ಖರೀದಿಸಿ ಕೊಡಲು ಸರ್ಕಾರ ಮುಂದಾಗಬೇಕೆಂದು ಉತ್ತರ ಕರ್ನಾಟಕದ ಜನರು ಒತ್ತಾಯಿಸಿದ್ದಾರೆ.
- ಮಲ್ಲೇಶ್ ಸೂರಣಗಿ 'ಪಬ್ಲಿಕ್ ನೆಕ್ಸ್ಟ್' ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
18/06/2022 11:36 am