ಧಾರವಾಡ; ಗ್ರಂಥಾಲಯ ಎಂದರೆ ಸುಸಜ್ಜಿತವಾಗಿರಬೇಕು. ಅಲ್ಲಿನ ವಾತಾವರಣ ಓದುಗರನ್ನು ಓದಿಗೆ ಪ್ರೇರೇಪಿಸುವಂತಿರಬೇಕು. ಆದರೆ ಇಲ್ಲಿನ ಕಮಲಾಪುರ ಬಡಾವಣೆಯಲ್ಲೊಂದು ಗ್ರಂಥಾಲಯವಿದೆ. ಇದು ಧಾರವಾಡ ನಗರ ಕೇಂದ್ರ ಗ್ರಂಥಾಲಯದ ಶಾಖೆಯೂ ಹೌದು. ಆದರೆ ಬಹಳ ಹಳೆಯದಾದ ಗ್ರಂಥಾಲಯ ಕಟ್ಟಡ ಇದಾಗಿದ್ದು, ಮಳೆ ಬಂದರೆ ಸಾಕು ಎಲ್ಲರೂ ಗ್ರಂಥಾಲಯ ಬಿಟ್ಟು ಹೊರಗಡೆ ಓಡಬೇಕಾದ ಪರಿಸ್ಥಿತಿ ಇಲ್ಲಿದೆ.
ಮಳೆ ಬಂದರೆ ಮಾಳಿಗೆ ಸೋರಿ ನೀರು ಗ್ರಂಥಾಲಯದಲ್ಲಿ ಆವರಿಸುತ್ತದೆ. ಈ ಬಡಾವಣೆಯಲ್ಲಿ ಅನೇಕ ಹಿರಿಯರು ಹಾಗೂ ಸೇವಾ ನಿವೃತ್ತಿ ಹೊಂದಿದವರಿದ್ದಾರೆ. ಅವರು ಓದುವ ಹವ್ಯಾಸ ರೂಢಿಸಿಕೊಂಡಿದ್ದು, ಪ್ರತಿನಿತ್ಯ ಈ ಗ್ರಂಥಾಲಯಕ್ಕೆ ಬಂದು ಪತ್ರಿಕೆಗಳನ್ನು ಓದುತ್ತಾರೆ. ಆದರೆ, ಗ್ರಂಥಾಲಯದ ಕಟ್ಟಡವೇ ಸುಸಜ್ಜಿತವಾಗಿರದ ಕಾರಣ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಈ ಕಟ್ಟಡ ಸುಣ್ಣ ಬಣ್ಣ ಕಂಡು ದಶಕಗಳೇ ಕಳೆದಿವೆ. ಕಟ್ಟಡದ ಮೇಲ್ಛಾವಣಿಯು ಕಳಚಿ ಬೀಳುತ್ತಿದೆ. ಗೋಡೆ ಬಿರುಕು ಬಿಟ್ಟಿದೆ. ಗ್ರಂಥಾಲಯದ ನಾಮಫಲಕವಂತೂ ಕಾಣದಂತಾಗಿದೆ. ಕೂಡಲೇ ಕೇಂದ್ರ ಗ್ರಂಥಾಲಯದವರು ಹಾಗೂ ಸ್ಥಳೀಯ ಶಾಸಕರು, ಸಂಸದರು ಈ ಕಟ್ಟಡದ ದುರಸ್ಥಿ ಮಾಡಿಸಿ ಸುಸಜ್ಜಿಯ ಗ್ರಂಥಾಲಯವನ್ನಾಗಿ ಮಾಡಬೇಕು ಹಾಗೂ ಒಳ್ಳೊಳ್ಳೆಯ ಪುಸ್ತಕಗಳನ್ನು ಓದಲು ತಂದಿಡಬೇಕು ಎಂಬುದು ಅಲ್ಲಿನ ಹಿರಿಯ ನಾಗರಿಕರ ಒತ್ತಾಯವಾಗಿದೆ.
Kshetra Samachara
05/04/2022 05:37 pm