ಹುಬ್ಬಳ್ಳಿ: ಅವರೆಲ್ಲರೂ ಲೋಹದ ಹಕ್ಕಿ ಹಾರಾಟಕ್ಕೆ ತಮ್ಮ ಬದುಕುವ ಕನಸನ್ನು ಬಿಟ್ಟು ಬಹುದೂರದ ಸ್ಥಳಕ್ಕೆ ಬಂದವರು. ಜನಪ್ರತಿನಿಧಿಗಳ ಬಣ್ಣದ ಮಾತಿಗೆ ಮರುಳಾಗಿ ಬಣ್ಣದ ಕನಸನ್ನು ಬುಟ್ಟಿಯಲ್ಲಿ ಕಟ್ಟಿಕೊಂಡು ಬಂದವರು. ಈಗ ಕಂಡ ಕನಸು ನನಸಾಗದೇ ಆಸೆಗೆ ತಣ್ಣೀರು ಹಾಕಿದಂತಾಗುತ್ತಿದೆ. ಹಾಗಿದ್ದರೇ ಅಲ್ಲಿ ಆಗಿದ್ದಾದರೂ ಏನು ಅಂತೀರಾ ಈ ಸ್ಟೋರಿ ನೋಡಿ.
ಅಂಕು ಡೊಂಕಾದ ಸಿಸಿ ರಸ್ತೆಗಳು, ಬಾಗಿಲು ಇಲ್ಲದ ಮನೆಗಳು, ನೆಲ ಮಟ್ಟಕ್ಕಿಂತ ಕೆಳಗಿರುವ ಮನೆಯ ಅಡಿಪಾಯಗಳು, ಮನೆ ಎತ್ತರಕ್ಕೆ ಬೆಳೆದಿರುವ ಗಿಡ ಕಂಟಿಗಳು. ಹೀಗೆ ಹೇಳುತ್ತ ಹೋದರೆ ಅವ್ಯವಸ್ಥೆ ಪಟ್ಟಿ ಉದ್ದವಾಗುತ್ತದೆ. ಇದೇನೂ 50-60 ವರ್ಷಗಳ ಹಿಂದಿನ ಬಡಾವಣಿಯ ದುಸ್ಥಿತಿಯಲ್ಲ, ಹುಬ್ಬಳ್ಳಿ ವಿಮಾನ ನಿಲ್ದಾಣ ವಿಸ್ತರಣೆಗಾಗಿ ಮನೆ ಕಳೆದುಕೊಂಡ ಗೋಕುಲ ರಸ್ತೆ ಜಗದೀಶನಗರ ಆಶ್ರಯ ಬಡಾವಡೆ ನಿವಾಸಿಗಳ ನಿರ್ಮಾಣ ಹಂತದಲ್ಲಿರುವ ಬಡಾವಣೆಯ ಪರಿಸ್ಥಿತಿ.
ಶಾಸಕ ಅರವಿಂದ ಬೆಲ್ಲದ ಅವರು ಪ್ರತಿನಿಧಿಸುವ ವಿಧಾನಸಭಾ ವ್ಯಾಪ್ತಿಯ ಜಗದೀಶನಗರದಲ್ಲಿ ಕಳೆದ 7 ವರ್ಷಗಳಿಂದ ಇಲ್ಲಿ ಕಾಮಗಾರಿ ನಡೆಯುತ್ತಿದೆ.ಮನೆಗಳ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ಆದರೆ, ರಸ್ತೆ-ಗಟಾರ, ಕುಡಿಯುವ ನೀರು, ದೀಪ, ಒಳಚರಂಡಿ ವ್ಯವಸ್ಥೆ ಕಾಮಗಾರಿ ಬಾಕಿ ಇದೆ. ಇದಕ್ಕೆಲ್ಲ ವಿಳಂಬವಾಗಿರುವುದರಿಂದ ನಿರ್ಮಾಣಗೊಂಡಿರುವ ಮನೆಗಳ ಕಳಪೆ ಕಾಮಗಾರಿಯು ಅನಾವರಣಗೊಂಡಿದೆ.
ಸಾಲು ಸಾಲು ಮನೆಗಳ ನಡುವೆ ನಿರ್ಮಿಸಿರುವ ರಸ್ತೆ ನೇರವಾಗಿ ಇರಬೇಕಿತ್ತು. ಆದರೆ, ಅರ್ಧ-ಒಂದು ಅಡಿಯಷ್ಟು ವ್ಯತ್ಯಾಸ ಕಾಣುತ್ತದೆ. ಮನಸ್ಸಿಗೆ ಬಂದಂತೆ ದಿಕ್ಕು ದೆಸೆಯಿಲ್ಲದೆ ನಿರ್ಮಿಸಲಾಗಿದೆ. ಮನೆಗಳ ನಿರ್ಮಾಣವು ಸಹ ಸಮಾನಾಂತರವಾಗಿಲ್ಲ. ನಿರ್ಮಾಣಗೊಂಡ ಮನೆಗಳಿಗೆ ಬಾಗಿಲುಗಳನ್ನು ಜೋಡಿಸಿಲ್ಲ. ಸುರಕ್ಷತೆ ದೃಷ್ಟಿಯಿಂದ ಕಬ್ಬಿಣದ ಬಾಗಿಲುಗಳನ್ನು ಅಳವಡಿಸಬೇಕೆಂದು ಫಲಾನುಭವಿಗಳು ಆಗ್ರಹಿಸಿದ್ದರು. ಬಾಗಿಲುಗಳಿಲ್ಲದ ಖಾಲಿ ಮನೆಗಳಿಗೆ ಯಾರು ಬೇಕಾದರೂ ಯಾವುದೇ ಸಂದರ್ಭದಲ್ಲಿ ಆದರೂ ನುಗ್ಗಬಹುದು ಕನಸಿನ ಮನೆಯ ಕನಸನ್ನು ಕಟ್ಟಿಕೊಂಡು ಬಂದವರು ಈಗ ಕಣ್ಣೀರು ಹಾಕುತ್ತಿದ್ದಾರೆ.
ಒಟ್ಟಿನಲ್ಲಿ ಕಣ್ಣು ಮುಂದಿರುವ ಕಳಪೆ ಕಾಮಗಾರಿ ವಿಳಂಬ, ಲೋಪದೋಷವು ಜನಪ್ರತಿನಿಧಿಗಳಿಗೆ, ಜಿಲ್ಲಾಡಳಿತಕ್ಕೆ ಗೋಚರಿಸುತ್ತಿಲ್ಲ, ಆಶ್ರಯ ಮನೆಗಳು ಹೇಗಿದ್ದರೂ ನಿವಾಸಿಗಳು ಉಳಿದುಕೊಳ್ಳುತ್ತಾರೆ ಎಂಬ ಧೋರಣಿ ಇವರೆಲ್ಲರಿಗೂ ಇದ್ದಂತಿದೆ. ಇಲ್ಲಿಯ ಕಾಮಗಾರಿಗಳನ್ನು ನೋಡಿದರೆ ಕೋಟ್ಯಂತರ ರೂಪಾಯಿ ನೀರಿನಲ್ಲಿ ಹೋಮ ಮಾಡಿದಂತೆ ಕಾಣುತ್ತದೆ. ಒಟ್ಟಾರೆ ನಿರ್ಮಿತಿ ಕೇಂದ್ರದ ನಿರ್ಲಕ್ಷ್ಯ ಕಣ್ಣಿಗೆ ಕಾಣುತ್ತದೆ.
ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
Kshetra Samachara
30/03/2022 05:48 pm