ವರದಿ: ಮಲ್ಲೇಶ ಸೂರಣಗಿ
ಹುಬ್ಬಳ್ಳಿ: ಏಳು ಜಿಲ್ಲೆಗಳ ಜೀವನಾಡಿ ಹೆಗ್ಗಳಿಕೆಯ ಆ ಸಾರಿಗೆ ಸಂಸ್ಥೆಗೆ ಅದೇನಾಗಿದೆಯೋ ಗೊತ್ತಿಲ್ಲ. ಸಿಬ್ಬಂದಿ ಹೊಟ್ಟೆ- ಬಟ್ಟೆ ಕಟ್ಟಿಕೊಂಡೇ ಜೀವನ ಸಾಗಿಸುತ್ತಿದ್ದಾರೆ. ಸಂಬಳ ಕೊಡುವಲ್ಲಿಯೂ ವಿಳಂಬ ಜತೆಗೆ ಕರ್ತವ್ಯ ನಿರ್ವಹಿಸಲು ಬೇಕಾದ ಸಮವಸ್ತ್ರ ನೀಡುತ್ತಿಲ್ಲ. ಇದರಿಂದ ಹರಿದ ಬಟ್ಟೆಯಲ್ಲೇ ಸಿಬ್ಬಂದಿ ಕೆಲಸಕ್ಕೆ ಹಾಜರಾಗುವಂತಾಗಿದೆ !
ಹೌದು... ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಕಳೆದೆರಡು ವರ್ಷಗಳಿಂದಲೂ ಸಿಬ್ಬಂದಿಗೆ ವೇತನ ನೀಡಿಲ್ಲ. ಸಿಬ್ಬಂದಿ ಅರ್ಧ ಸಂಬಳದಲ್ಲೇ ಜೀವಿಸುವಂತಾಗಿದೆ. ಜತೆಗೆ ಸಮವಸ್ತ್ರಕ್ಕೂ ಗತಿ ಇಲ್ಲ! ಇಲ್ಲಿ 23 ಸಾವಿರ ಸಿಬಂದಿ ಕರ್ತವ್ಯದಲ್ಲಿದ್ದಾರೆ. ಇವರಿಗೆ ವೇತನದೊಂದಿಗೆ ವರ್ಷಕ್ಕೆ 2 ಜೋಡಿ ಸಮವಸ್ತ್ರ ನೀಡಬೇಕಿದ್ದ ಸಂಸ್ಥೆ, 3 ವರ್ಷಗಳಾದರೂ ನೀಡಿಲ್ಲ. ಸಂಸ್ಥೆಯೇ ಅಶಿಸ್ತಿನಿಂದ ವರ್ತಿಸುತ್ತಿರುವುದು ಸಾರ್ವಜನಿಕರ ಹಾಗೂ ಸಿಬ್ಬಂದಿ ಆಕ್ರೋಶಕ್ಕೆ ಕಾರಣವಾಗಿದೆ.
ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಈ ತಿಂಗಳು ಕೊಡುತ್ತೇವೆ, ಮುಂದಿನ ತಿಂಗಳು ಕೊಡುತ್ತೇವೆ ಎಂದು ಹಾರಿಕೆಯ ಉತ್ತರವನ್ನಷ್ಟೇ ನೀಡುತ್ತಿದ್ದಾರೆ ವಿನಃ ವರ್ಷಕ್ಕೆ ಒಂದು ಜೋಡಿ ಸಮವಸ್ತ್ರ ನೀಡುವ ಬಗ್ಗೆ ಚಿಂತನೆ ನಡೆಸಿಲ್ಲ. ಆದ್ರೆ, ಸಂಸ್ಥೆ ಅಧ್ಯಕ್ಷರು ಮಾತ್ರ ಶೀಘ್ರ ಕೊಡ್ತೀವಿ ಎಂಬ ಭರವಸೆಯನ್ನೇ ಪುನರಾವರ್ತಿಸುತ್ತಿದ್ದಾರೆ.
ಸೂಕ್ತ ವೇತನ ಇಲ್ಲದಿದ್ದರೂ ಸಿಬ್ಬಂದಿ ಕೆಲಸ ಮಾಡಬಹುದು. ಆದರೆ, ಹಾಕಲು ಬಟ್ಟೆಗಳೇ ಇಲ್ಲದಿದ್ದರೆ ಮರ್ಯಾದೆಗೆ ಚ್ಯುತಿಯಲ್ಲವೇ? ಆದ್ದರಿಂದ ಸಂಬಂಧಿಸಿದವರು ಎಚ್ಚೆತ್ತು ಸಮವಸ್ತ್ರ ನೀಡಿ ಸಿಬ್ಬಂದಿಯ ಮಾನ ಕಾಪಾಡಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
25/03/2022 12:54 pm