ಹುಬ್ಬಳ್ಳಿ: ಗಣೇಶ ಹಬ್ಬ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ನಗರದಿಂದ ದೂರದ ಸ್ಥಳಗಳಿಗೆ ಜನರ ಓಡಾಟ ಹೆಚ್ಚಾಗುವ ನಿರೀಕ್ಷೆ ಇದೆ. ಸಾರ್ವಜನಿಕರ ಬೇಡಿಕೆಯ ಮೇರೆಗೆ ಸೋಮವಾರದಿಂದ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಮಧ್ಯಾಹ್ನದ ಸಮಯದಲ್ಲಿ ತಡೆರಹಿತ ಐರಾವತ ವೋಲ್ವೋ ಹಾಗೂ ಹೈದರಾಬಾದ್‌ಗೆ ಸಂಜೆ ಮತ್ತೊಂದು ನಾನ್ ಎಸಿ ಸ್ಲೀಪರ್ ಬಸ್ ಸಂಚಾರವನ್ನು ಆರಂಭಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ, ಈ ಬಸ್‌ಗಳು ಹುಬ್ಬಳ್ಳಿ ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಹೊರಡುತ್ತವೆ. ಬೆಂಗಳೂರಿಗೆ ತೆರಳುವ ತಡೆರಹಿತ ಐರಾವತ ಬಸ್ ಹುಬ್ಬಳ್ಳಿಯಿಂದ ಮಧ್ಯಾಹ್ನ 1ಕ್ಕೆ ಹೊರಡುತ್ತದೆ. ಸಂಜೆ 7:30ಕ್ಕೆ ಬೆಂಗಳೂರು ತಲುಪುತ್ತದೆ. ಬೆಂಗಳೂರಿನಿಂದ ಮಧ್ಯಾಹ್ನ 3ಕ್ಕೆ ಬಿಟ್ಟು ರಾತ್ರಿ 9:30ಕ್ಕೆ ಹುಬ್ಬಳ್ಳಿಗೆ ಆಗಮಿಸುತ್ತದೆ. ಪ್ರೋತ್ಸಾಹಕ ಪ್ರಯಾಣ ದರ ರೂ. 730 ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಮೊದಲು ಹುಬ್ಬಳ್ಳಿಯಿಂದ ಬಸ್ ಮಧ್ಯಾಹ್ನ 3ಕ್ಕೆ ಹೊರಡುತ್ತಿತ್ತು. ರಾತ್ರಿ 9:30ಕ್ಕೆ ಬೆಂಗಳೂರಿಗೆ ತಲುಪಬೇಕಾಗಿತ್ತು. ಆದರೆ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್‌ನಿಂದಾಗಿ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬಹಳ ತಡವಾಗಿ ಅಂದರೆ 10 ಗಂಟೆಯ ನಂತರ ತಲುಪುತ್ತಿತ್ತು. ಇದರಿಂದ ಬಸ್ ಇಳಿದ ನಂತರ ಪ್ರಯಾಣಿಕರಿಗೆ ಅದರಲ್ಲೂ ಮುಖ್ಯವಾಗಿ ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷಿತವಾಗಿ ಮನೆ ತಲುಪಲು ಅನಾನುಕೂಲವಾಗಿತ್ತು. ಅದ್ದರಿಂದ ಹುಬ್ಬಳ್ಳಿ ಬಿಡುವ ಸಮಯ ಬದಲಾವಣೆಗೆ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದರು. ಅದರಂತೆ ಕ್ರಮ ವಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಹೈದರಾಬಾದ್‌ಗೆ ತೆರಳುವ ನಾನ್ ಎಸಿ ಸ್ಲೀಪರ್ ಬಸ್ ಹುಬ್ಬಳ್ಳಿಯಿಂದ ಸಂಜೆ 7:35ಕ್ಕೆ ಹೊರಡುತ್ತದೆ. ಮರುದಿನ ಬೆಳಗ್ಗೆ 6:35ಕ್ಕೆ ಹೈದರಾಬಾದ್ ತಲುಪುತ್ತದೆ. ಹೈದರಾಬಾದ್‌ನಿಂದ ಸಂಜೆ 7:15ಕ್ಕೆ ಬಿಟ್ಟು ಮರುದಿನ ಬೆಳಗ್ಗೆ 6:15ಕ್ಕೆ ಹುಬ್ಬಳ್ಳಿಗೆ ಆಗಮಿಸುತ್ತದೆ. ಪ್ರೋತ್ಸಾಹಕ ಪ್ರಯಾಣ ದರ ರೂ. 910 ನಿಗದಿಪಡಿಸಲಾಗಿದೆ. ಇದರೊಂದಿಗೆ ಈಗಾಗಲೆ ಹುಬ್ಬಳ್ಳಿಯಿಂದ ಹೈದರಾಬಾದ್‌ಗೆ ಸಂಜೆ 7ಕ್ಕೆ ಹೊರಡುವ ನಾನ್ ಎಸಿ ಸ್ಲೀಪರ್ ಬಸ್ ಸೇವೆ ಸಹ ಮುಂದುವರೆಯಲಿದೆ ಎಂದು ಎಚ್.ರಾಮನಗೌಡರ ತಿಳಿಸಿದ್ದಾರೆ.
ಈ ಬಸ್‌ಗಳಿಗೆ www.ksrtc.in ವೆಬ್ ಸೈಟ್ ನಲ್ಲಿ ಆನ್ ಲೈನ್ ಮೂಲಕ ಅಥವಾ ಹೊಸೂರು, ಗೋಕುಲ ರಸ್ತೆ ಬಸ್ ನಿಲ್ದಾಣದಲ್ಲಿನ ಕೌಂಟರ್ ನಲ್ಲಿ ಹಾಗೂ ಪ್ರಾಂಚೈಸಿ ಕೇಂದ್ರಗಳಲ್ಲಿ ಮುಂಗಡ ಬುಕಿಂಗ್ ಗೆ ಅವಕಾಶ ಕಲ್ಪಿಸಲಾಗಿದೆ.
Kshetra Samachara
07/09/2021 07:41 am