ಅದು ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ. ದಿನ ಕಳೆದಂತೆ ಬೆಳೆಯುತ್ತಾ ಹೋಗುತ್ತಿದೆ. ಈ ಪಾಲಿಕೆಯಲ್ಲಿ ತ್ಯಾಜ್ಯ ನಿರ್ವಹಣೆ ದೊಡ್ಡ ಸವಾಲಾಗಿದ್ದು, ಈಗ ಮತ್ತೊಂದು ಕಾರ್ಯದ ಮೂಲಕ ಕಟ್ಟಡ ತ್ಯಾಜ್ಯ ನಿರ್ವಹಣೆಗೆ ಪಾಲಿಕೆ ಮುಂದಾಗಿದೆ. ಅಷ್ಟಕ್ಕೂ ಏನಿದು ಈ ಹೊಸ ಪ್ಲ್ಯಾನ್ ಅಂತೀರಾ ಈ ಸ್ಟೋರಿ ನೋಡಿ...
ಎಲ್ಲೆಂದರಲ್ಲಿ ಕಟ್ಟಡ ತ್ಯಾಜ್ಯ ಎಸೆಯುವುದನ್ನು ತಪ್ಪಿಸಲು ಮತ್ತು ಅದರಿಂದಾಗುವ ತೊಂದರೆಗಳನ್ನು ತಡೆಯಲು ಮುಂದಾಗಿರುವ ಮಹಾನಗರ ಪಾಲಿಕೆಯು, ಧಾರವಾಡ ತಾಲ್ಲೂಕಿನ ಶಿವಳ್ಳಿಯಲ್ಲಿ ಕಟ್ಟಡ ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಿಸಲು ಮುಂದಾಗಿದೆ. ಹೌದು...ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ದಿನ ಅಂದಾಜು 100 ಟನ್ಗಿಂತಲೂ ಹೆಚ್ಚು ಕಟ್ಟಡ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಕಟ್ಟಡಗಳನ್ನು ನಿರ್ಮಿಸುವಾಗ ಮತ್ತು ಹಳೆಯ ಕಟ್ಟಡಗಳನ್ನು ನೆಲಸಮ ಮಾಡುವಾಗ ಉತ್ಪತ್ತಿಯಾಗುವ ತ್ಯಾಜ್ಯವನ್ನು ರಸ್ತೆ ಬದಿ, ಖಾಲಿ ನಿವೇಶನಗಳು, ಜಲಮೂಲಗಳು ಹಾಗೂ ಕೆರೆಯಂಚುಗಳಲ್ಲಿ ಸುರಿಯಲಾಗುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ಮತ್ತು ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ದಂಡ ವಿಧಿಸಿದರೂ ಇದಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿರಲಿಲ್ಲ. ಶಿವಳ್ಳಿಯಲ್ಲಿ ಪಾಲಿಕೆಗೆ ಸೇರಿದ 67 ಎಕರೆ ಜಾಗ ಇದೆ. ಅದರಲ್ಲಿ ಐದು ಎಕರೆಯಲ್ಲಿ ಕಟ್ಟಡ ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣವಾಗಲಿದೆ.
ಈಗಾಗಲೇ ರಸ್ತೆ, ಶೌಚಾಲಯ, ಶೆಡ್ ಸೇರಿದಂತೆ ಮೂಲಸೌಕರ್ಯಗಳು ಸಿದ್ಧಗೊಂಡಿವೆ. ಘಟಕ ನಿರ್ಮಾಣಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ 3.5 ಕೋಟಿ ಅನುದಾನ ಬಿಡುಗಡೆ ಆಗಿದೆ. ಅಲ್ಲದೆ, ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ರಾಷ್ಟ್ರೀಯ ಶುದ್ಧ ಗಾಳಿ ಯೋಜನೆಯಡಿ ಸಹ ಘಟಕ ನಿರ್ಮಾಣಕ್ಕೆ ಅನುದಾನ ಸಿಗಲಿದೆ. 2016-17ರಲ್ಲಿಯೇ ಕಟ್ಟಡ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲು ಯೋಜನೆ ರೂಪಿಸಲಾಗಿತ್ತು. ಆದರೆ, ವಿವಿಧ ಕಾರಣಗಳಿಗಾಗಿ ಅದು ಸಾಧ್ಯವಾಗಿರಲಿಲ್ಲ. 2016-17ರ ಯೋಜನೆಯಂತೆ ಪ್ರತಿ ದಿನಕ್ಕೆ 50 ಟನ್ ಕಟ್ಟಡ ತ್ಯಾಜ್ಯ ಸಂಸ್ಕರಣೆ ಮಾಡುವ ಸಾಮರ್ಥ್ಯದ ಘಟಕ ನಿರ್ಮಾಣ ಮಾಡುವ ಗುರಿ ಇತ್ತು. ಈಗ ನಗರದ ಬೆಳವಣಿಗೆ ಆಧರಿಸಿ ಮತ್ತು ಮುಂದಿನ 10 ವರ್ಷಗಳಲ್ಲಿ ಆಗಬಹುದಾದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ದಿನಕ್ಕೆ 200 ಟನ್ ಮತ್ತು ಅದಕ್ಕಿಂತ ಹೆಚ್ಚು ಸಂಸ್ಕರಣೆ ಮಾಡುವ ಘಟಕ ಸ್ಥಾಪಿಸುವ ಯೋಜನೆ ಇದೆ.
ಒಟ್ಟಿನಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಯಾರೇ ಕಟ್ಟಡ ನಿರ್ಮಿಸಿದರೂ, ನೆಲಸಮ ಮಾಡಿದರೂ ಆ ಸಂದರ್ಭದಲ್ಲಿ ಉತ್ಪತ್ತಿಯಾಗುವ ಕಟ್ಟಡ ತ್ಯಾಜ್ಯ ವಿಲೇವಾರಿಗೆ ಕೆ.ಜಿ. ಲೆಕ್ಕದಲ್ಲಿ ಬಳಕೆದಾರರ ಶುಲ್ಕವನ್ನು ನಿಗದಿ ಪಡಿಸಲಾಗುತ್ತದೆ. ಈ ಯೋಜನೆ ಯಶಸ್ವಿಯಾಗಿ ರೂಪುಗೊಂಡು ಅವಳಿ ನಗರ ಮತ್ತಷ್ಟು ಸ್ವಚ್ಚ ನಗರವಾಗಿ ಬೆಳೆಯಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
13/08/2022 01:00 pm