ಕಲಘಟಗಿ: ಹೌದು... ಕಲಘಟಗಿ ತಾಲೂಕಿನ ಸಚ್ಚಿದಾನಂದ ನಗರ ಗ್ರಾಮದಲ್ಲಿ ಮಕ್ಕಳಿಗೆ ಕಲಿಯೋಕೆ ಅಂಗನವಾಡಿ ಕೇಂದ್ರ ಇದ್ದೂ ಇಲ್ಲದಂತಾಗಿದೆ. ಮಕ್ಕಳು ಶಾಲಾ ಕೊಠಡಿಯಲ್ಲಿ ಕಲಿಯುತ್ತಿದ್ದು, ಆ ಕೊಠಡಿ ಕೂಡ ಮಳೆಗೆ ಸೋರುತ್ತಿರುವುದರಿಂದ ಪೋಷಕರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕರೆತರಲು ಹಿಂದೇಟು ಹಾಕುತ್ತಿದ್ದಾರೆ.
ಹಾಗಂತ ಇಲ್ಲಿ ಅಂಗನವಾಡಿ ಕೇಂದ್ರ ಇಲ್ಲ ಅಂತ ಹೇಳುವ ಹಾಗಿಲ್ಲ. 2015-16ನೇ ಸಾಲಿನಲ್ಲಿ ಇಲ್ಲಿ 13 ಲಕ್ಷ ರೂ. ವೆಚ್ಚದಲ್ಲಿ ಜಿಲ್ಲಾ ಪಂಚಾಯತ್ ನವರು ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಆದರೆ, ಇದುವರೆಗೂ ಈ ಕಟ್ಟಡ ಉದ್ಘಾಟನೆಗೊಳ್ಳದೆ ಪಾಳು ಬಿದ್ದಿರುವುದು ವಿಪರ್ಯಾಸವೇ ಸರಿ.
ಗುತ್ತಿಗೆದಾರ ಕೆಲಸವನ್ನು ಸಂಪೂರ್ಣ ಮಾಡದೇ ಬಿಟ್ಟಿದ್ದು ಕಟ್ಟಡ ಹಾಳಾಗುತ್ತಿದೆ. ಅಂಗನವಾಡಿ ಕಟ್ಟಡ ಇಲ್ಲದ ಕಾರಣ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅವಕಾಶ ನೀಡಲಾಗಿದ್ದು, ಈ ಕೊಠಡಿ ಕೂಡ ಮಳೆ ಬಂದರೆ ಸಂಪೂರ್ಣ ಸೋರುತ್ತಿದೆ.
ಮಕ್ಕಳ ಕಲಿಕೆಗಾಗಿ ಕೋಟ್ಯಂತರ ರೂ. ಖರ್ಚು ಮಾಡುತ್ತೇವೆ ಎಂದು ಹೇಳಿಕೊಳ್ಳುವ ಸರಕಾರ, ಗ್ರಾಮೀಣ ಭಾಗದತ್ತ ಒಂದು ಬಾರಿ ಗಮನ ಹರಿಸಬೇಕಾಗಿದೆ. ಸಂಬಂಧಪಟ್ಟ ಅಧಿಕಾರಿಗಳು, ಸ್ಥಳೀಯ ಶಾಸಕರು ಇತ್ತ ಕಡೆ ಚಿತ್ತ ಹರಿಸಿ ಮಕ್ಕಳ ಕಲಿಕೆಗೆ ಅನುಕೂಲ ಮಾಡಿ ಕೊಡಬೇಕಾಗಿದೆ.
ವರದಿ: ಉದಯ ಗೌಡರ, ಪಬ್ಲಿಕ್ ನೆಕ್ಸ್ಟ್ ಕಲಘಟಗಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
08/07/2022 04:50 pm