ಹುಬ್ಬಳ್ಳಿ: ಅವರೆಲ್ಲರೂ ರೈಲ್ವೇ ಸ್ವಚ್ಛತೆಗಾಗಿ ಶ್ರಮಿಸುವ ಹೊರಗುತ್ತಿಗೆ ಕಾರ್ಮಿಕರು. ದುಡಿದ ವೇತನ ಪಡೆಯಬೇಕಾದ ಅವರು ಜೀವದ ಭಯದಲ್ಲಿಯೇ ಕರ್ತವ್ಯ ನಿರ್ವಹಣೆಯ ಮಾಡುತ್ತಿದ್ದಾರೆ. ಮಾಡುವ ಕೆಲಸದಲ್ಲಿ ಸಾಕಷ್ಟು ಮಾನಸಿಕ ಹಿಂಸೆ ಹಾಗೂ ದೈಹಿಕ ಹಿಂಸೆಯನ್ನು ಅನುಭವಿಸುವ ಕುರಿತು ಮಾಧ್ಯಮದ ಮುಂದೆ ಕಣ್ಣೀರು ಹಾಕುತ್ತಿದ್ದಾರೆ. ಅಷ್ಟಕ್ಕೂ ಅಲ್ಲಿ ನಡೆದಿದ್ದಾದರೂ ಏನು ಅಂತೀರಾ ಈ ಸ್ಟೋರಿ ನೋಡಿ.
ಹೀಗೆ ಮಾಧ್ಯಮದ ಮುಂದೆ ಕಣ್ಣೀರು ಹಾಕುತ್ತಿರುವ ಯುವಕರು. ತಮ್ಮ ಮಕ್ಕಳ ಕಷ್ಟವನ್ನು ಬಿಚ್ಚಿಡುತ್ತಿರುವ ಮಹಿಳೆ ಇದೆಲ್ಲದಕ್ಕೂ ಸಾಕ್ಷಿಯಾಗಿದ್ದು ಹುಬ್ಬಳ್ಳಿ ರೈಲ್ವೆ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಸಿಬ್ಬಂದಿ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕಥೆ. ಹೌದು... ಹುಬ್ಬಳ್ಳಿಯ ನೈರುತ್ಯ ರೈಲ್ವೇ ವಲಯದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸ್ವಚ್ಛತಾ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಗುತ್ತಿಗೆದಾರರು ಸೂಕ್ತ ಸೌಲಭ್ಯಗಳನ್ನು ನೀಡುತ್ತಿಲ್ಲ. ಅಲ್ಲದೇ ದೌರ್ಜನ್ಯದ ಮೂಲಕ ದರ್ಪ ತೋರಿಸಿ ಜೀವ ಬೆದರಿಕೆ ಹಾಕಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಕಾರ್ಮಿಕರು ಗಂಭೀರವಾಗಿ ಆರೋಪ ಮಾಡುತ್ತಿದ್ದಾರೆ. ಈ ಕುರಿತು ಸಪಾಯಿ ಕರ್ಮಚಾರಿ ನಿಗಮದ ಅಧ್ಯಕ್ಷರಿಗೂ ಕೂಡ ದೂರು ನೀಡಿದ್ದಾರೆ.
ಇನ್ನೂ ಗುತ್ತಿಗೆದಾರರು ತಮ್ಮ ಗನ್‌ಮ್ಯಾನ್ ಮುಂದಿಟ್ಟುಕೊಂಡು ಜೀವ ಬೆದರಿಕೆ ಹಾಕಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ನಮ್ಮ ಕೆಲಸ ನಾವು ಮಾಡುತ್ತೇವೆ. ಆದರೆ ಗುತ್ತಿಗೆದಾರರ ದರ್ಪಕ್ಕೆ ನಾವು ಭಯದಲ್ಲಿಯೇ ಕೆಲಸ ಮಾಡುವಂತಾಗಿದೆ. ಈ ಬಗ್ಗೆ ನಾವು ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಮಗೆ ನ್ಯಾಯ ಕೊಡಿಸಿ ಎಂದು ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಒಟ್ಟಿನಲ್ಲಿ ವಿಶ್ವದ ಅತಿದೊಡ್ಡ ರೈಲ್ವೇ ಪ್ಲಾಟ್ ಫಾರಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಾಣಿಜ್ಯನಗರಿಯಲ್ಲಿ ಇಂತಹದೊಂದು ಅವ್ಯವಸ್ಥೆ ತಲೆದೂರಿದ್ದು, ಈ ಬಗ್ಗೆ ರೈಲ್ವೆ ಇಲಾಖೆ ಉನ್ನತ ಮಟ್ಟದ ಅಧಿಕಾರಿಗಳು ಸೂಕ್ತ ಪರಿಶೀಲನೆ ನಡೆಸಿ ಇಂತಹ ವ್ಯವಸ್ಥೆಗೆ ಬ್ರೇಕ್ ಹಾಕುವ ಕಾರ್ಯವನ್ನು ಮಾಡಬೇಕಿದೆ.
Kshetra Samachara
28/08/2022 09:57 am