ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ-ಬೆಳಗಾವಿ ರೈಲು ಮಾರ್ಗ ಅನುಷ್ಠಾನಕ್ಕೆ ಚಿಂತನೆ: ಆಸಕ್ತರ ಹುಡುಕಾಟದಲ್ಲಿ ಎಸ್‌ಡಬ್ಲ್ಯೂಆರ್

ಹುಬ್ಬಳ್ಳಿ: ಧಾರವಾಡ-ಬೆಳಗಾವಿ ರೈಲು ಮಾರ್ಗ ನಿರ್ಮಾಣ ಯೋಜನೆ ಅನುಷ್ಠಾನಕ್ಕೆ ರೈಲ್ವೆ ಮಂಡಳಿಯು ಆಸಕ್ತ ಸಂಸ್ಥೆಗಳ ಹುಡುಕಾಟದಲ್ಲಿ ತೊಡಗಿದ್ದು, ಕೊಂಕಣ ರೈಲ್ವೆ, ರೈಲ್ವೆ ವಿಕಾಸ, ರೈಲ್ವೆ ನಿರ್ಮಾಣ ಸಂಸ್ಥೆ, ರೈಲ್ವೆ ತಾಂತ್ರಿಕ ಮತ್ತು ಆರ್ಥಿಕ ಸೇವೆ ಹಾಗೂ ಬ್ರಿಡ್ಜ್‌ ಆ್ಯಡ್ ರೂಫ್ ಕಂ.ಸಂಸ್ಥೆಗಳಿಂದ ಅಭಿಪ್ರಾಯ ಆಹ್ವಾನಿಸಿದೆ.

ಹೌದು. ಈ ಕುರಿತು ಸಂಸ್ಥೆಗಳು ಇಲ್ಲಿಯವರೆಗ ತಮ್ಮ ಆಸಕ್ತಿ ತೋರಿಸಿಲ್ಲ ಎಂದು ನೈರುತ್ಯ ರೈಲ್ವೆ ಮೂಲಗಳು ತಿಳಿಸಿವೆ. ಅಂತಿಮವಾಗಿ ರೈಲ್ವೆ ಮಂಡಳಿಯು ಈ ಐದು ಸಂಸ್ಥೆಗಳಲ್ಲಿ ಒಂದನ್ನು ಆಯ್ಕೆ ಮಾಡಿ ಯೋಜನೆ ಅನುಷ್ಠಾನದ ಹೊಣೆಗಾರಿಕೆ ನೀಡಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಏತನ್ಮಧ್ಯೆ ರೈಲು ಮಾರ್ಗ ನಿರ್ಮಾಣಕ್ಕೆ 827.78 ಎಕರೆ (335 ಹೆಕ್ಟೇರ್) ಭೂಮಿ ಅವಶ್ಯವಿದೆ ಎಂದು ನೈರುತ್ಯ ರೈಲ್ವೆ ತಾತ್ಕಾಲಿಕವಾಗಿ ಅಂದಾಜಿಸಿದ್ದು, ಆರಂಭಿಕ ಹಂತದಲ್ಲಿ 4 ಕಿ.ಮೀ.ಯಷ್ಟು ಭೂಮಿ ನೀಡುವಂತೆ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಿದೆ.

ಈ ಅಗತ್ಯ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ರೈಲ್ವೆ ಹಸ್ತಾಂತರಿಸಿದಲ್ಲಿ ಮಾರ್ಗ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಬಹುದಾಗಿದೆ. 255.93 + 601 ಎಕರೆ ಭೂಮಿ ಒಟ್ಟು 73 ಕಿ.ಮೀ ರೈಲು ಮಾರ್ಗ ನಿರ್ಮಾಣಕ್ಕೆ ಧಾರವಾಡ ಜಿಲ್ಲೆಯ ವ್ಯಾಪ್ತಿಯಲ್ಲಿ ಧಾರವಾಡದಿಂದ ಕಿಮೀ 7ರಿಂದ 26 ಕಿಮೀವರೆಗೆ 255.93 ಎಕರೆ (91.46 ಹೆಕ್ಟೇರ್) ಹಾಗೂ ಬೆಳಗಾವಿ ಜಿಲ್ಲೆ ವ್ಯಾಪ್ತಿಯ ಕಿ.ಮೀ 26ರಿಂದ 73 ಕಿ.ಮೀ ವರೆಗೆ 601 ಎಕರೆ(243.54 ಹೆಕ್ಟೇರ್) ಭೂಮಿ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಇಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಂಡು ನೈರುತ್ಯ ರೈಲ್ವೆ ಹಸ್ತಾಂತರಿಸುವಂತೆ ಬೇಡಿಕೆ ಸಲ್ಲಿಸಿದ್ದು, 4 ಕಿ.ಮೀ ಮಾರ್ಗಕ್ಕೆ ಬೇಕಾದ ಭೂಮಿಯನ್ನು ಜರೂರಾಗಿ ಒದಗಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಸಾರ್ವಜನಿಕ ಮುಖ್ಯ ಸಂಪರ್ಕಾಕಾರಿ (ಸಿಪಿಆರ್‌ಓ) ವಿಜಯಾ ಹೇಳಿದ್ದಾರೆ.

ಧಾರವಾಡ ತಾಲೂಕಿನ ಕೆಲಗೇರಿ ಭಾಗ-1 ಮತ್ತು 2 ಒಂದು ಕಿ.ಮೀ.ನಷ್ಟು, ಚಿಕ್ಕಮಲ್ಲಿಗವಾಡ ಗ್ರಾಮದಲ್ಲಿ 2.5 ಕಿ.ಮೀ.ನಷ್ಟು ಹಾಗೂ ಕೆಲಗೇರಿ ಭಾಗ-3ರಲ್ಲಿ ಒಂದೂವರೇ ಕಿ.ಮೀ ಯಷ್ಟು ಭೂ ಸ್ವಾಧೀನ ಪಡಿಸಿಕೊಳ್ಳಬೇಕಾಗುತ್ತದೆ ಎಂದು ಜಿಲ್ಲಾಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ. ಧಾರವಾಡ ವ್ಯಾಪ್ತಿಯಲ್ಲಿ ಒಟ್ಟು 10 ಹಳ್ಳಿಗಳಲ್ಲಿ ಈ ಮಾರ್ಗ ನಿರ್ಮಾಣವಾಗಲಿದೆ ಎಂದು ನೈರುತ್ಯ ರೈಲ್ವೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಕಂಡು ಬಂದಿದೆ.

ಒಟ್ಟು 927.47 ಕೋಟಿ ರೂ. ಯೋಜನಾ ವೆಚ್ಚವಾಗಿದ್ದು, ರಾಜ್ಯ ಸರಕಾರ ಉಚಿತ ಭೂಮಿ ಒದಗಿಸುವುದರ ಜತೆಗೆ ಕಾಮಗಾರಿಯ ಒಟ್ಟು ವೆಚ್ಚದ ಅರ್ಧದಷ್ಟನ್ನು ಒದಗಿಸಬೇಕಾಗುತ್ತದೆ. ಇನ್ನಿತರ ವೆಚ್ಚವನ್ನು ನೈರುತ್ಯ ರೈಲ್ವೆ ಭರಿಸಲಿದೆ. ರಾಜ್ಯ ಸರ್ಕಾರ ಎಷ್ಟು ಬೇಗ ಭೂಮಿ ಒದಗಿಸಲಿದೆಯೋ ಅಷ್ಟು ಬೇಗ ಯೋಜನೆ ಪೂರ್ಣಗೊಳ್ಳಲಿದೆ. ಭೂಮಿ ಹಸ್ತಾಂತರಿಸಿದ ದಿನದಿಂದ 2 ವರ್ಷದೊಳಗೆ ಮಾರ್ಗ ಪೂರ್ಣಗೊಳಿಸುವ ಹೊಣೆ ರೈಲ್ವೆಯದ್ದು. ರಾಜ್ಯ ಸರಕಾರ ವಿಳಂಬ ಮಾಡಿದರೆ, ಯೋಜನಾ ವೆಚ್ಚ ಮತ್ತಷ್ಟು ಹಿಗ್ಗಲಿದೆ.

ಸಚಿವ ಸುರೇಶ ಅಂಗಡಿಯವರು ಇದ್ದಾಗಿನ ಯೋಜನೆ ಪ್ರಕ್ರಿಯೆಯ ವೇಗ, ಅವರ ನಿಧನದ ನಂತರ ತುಸು ನಿಂತಂತಾಗಿದೆ ಎಂಬ ಭಾವನೆ ಬೆಳಗಾವಿ, ಧಾರವಾಡ ನಾಗರಿಕರಿಂದ ವ್ಯಕ್ತವಾಗುತ್ತಿದೆ.

Edited By : Vijay Kumar
Kshetra Samachara

Kshetra Samachara

30/11/2020 08:55 pm

Cinque Terre

22.73 K

Cinque Terre

4

ಸಂಬಂಧಿತ ಸುದ್ದಿ