ಕುಂದಗೋಳ: ಹೀಗೆ ಬಿಳಿ ಧೋತಿ ಬಿಳಿ ಅಂಗಿ ತೊಟ್ಟು, ಕಚ್ಚೆ ಕಟ್ಟಿಕೊಂಡು ನೆಲಕ್ಕೆ ಅಂಗೈ ಇಟ್ಟು ಕಸ ಗುಡಿಸುತ್ತಿರುವ ಈ ವ್ಯಕ್ತಿಯ ಹೆಸರು ಚಂಡ್ರಯ್ಯ ಮುಳಗುಂದ. ವಯಸ್ಸು 75 ರ ಆಸುಪಾಸು ಇರಬಹುದು, ಈ ತಾತನ ಶ್ರದ್ಧೆ ಕರ್ತವ್ಯ ನಿಜಕ್ಕೂ ಗ್ರೇಟ್..
ಕುಂದಗೋಳ ತಾಲೂಕಿನ ಮುಳ್ಳೊಳ್ಳಿ ಗ್ರಾಮದ ಈ ವೃದ್ಧ ಕಳೆದ 22 ವರ್ಷಗಳಿಂದ ಕುಂದಗೋಳ ಪಟ್ಟಣದ ಪರಿವೀಕ್ಷಣಾ ಮಂದಿರ, ಗಣ್ಯ ವ್ಯಕ್ತಿಗಳ ವಿಶ್ರಾಂತಿ ಗೃಹ ಹಾಗೂ ಲೋಕೋಪಯೋಗಿ ಇಲಾಖೆ ಸುತ್ತಮುತ್ತಲಿನ ಜಾಗವನ್ನು ಗುಡಿಸುತ್ತ ಮಾನವೀಯತೆ ದೃಷ್ಟಿಯಿಂದ ಅಧಿಕಾರಿಗಳು ಹಾಗೂ ಜನರು ಕೊಡುವ ಹಣದ ಮೇಲೆ ತಾನು ತನ್ನ ಮಡದಿಯನ್ನು ಕಟ್ಟಿಕೊಂಡು ಬದುಕಿನ ಬಂಡಿ ಎಳೆಯುತ್ತಿದ್ದಾರೆ. ಕಳೆದ ಎರಡು ವರ್ಷದ ಲಾಕ್ ಡೌನ್ ದಿನಗಳಲ್ಲೂ ಮುಳ್ಳೊಳ್ಳಿಯಿಂದ ಕುಂದಗೋಳ ಪಟ್ಟಣಕ್ಕೆ ಕಾಲ್ನಡಿಗೆಯಲ್ಲೇ ಬಂದು ಕಸಗೂಡಿಸುತ್ತಾ ತನ್ನ ಸೇವೆ ನೀಡಿದ್ದಾರೆ.
ಹೀಗೆ ಸರಿ ಸುಮಾರು ಹತ್ತು ಗುಂಟೆಗೂ ಅಧಿಕ ವಿಸ್ತೀರ್ಣದ ಪ್ರವಾಸಿ ಮಂದಿರ, ಲೋಕೋಪಯೋಗಿ ಇಲಾಖೆ ಆವರಣವನ್ನೂ ನಿತ್ಯ ಎರಡು ಹೊತ್ತು ಸ್ವಚ್ಚ ಮಾಡ್ತಾರೆ. ರಸ್ತೆ, ಫುಟ್ ಪಾತ್, ಇಲಾಖೆ ಮುಂದೆ ಒಂದು ಕಸ ಕಡ್ಡಿ ಬಿದ್ದರೂ ಕೈಯಲ್ಲೊಂದು ಕೈ ಚೀಲ ಹಿಡಿದು ಆರಿಸಿ ನೈರ್ಮಲ್ಯ ಕಾಪಾಡಿ ಅದೆಷ್ಟೋ ಜನರ ಮನ ಗೆದ್ದಿದ್ದಾನೆ. ಯಾರಲ್ಲೂ ಸಹ ಪುಡಿಗಾಸಿಗೆ ಕೈ ಚಾಚೋದಿಲ್ಲ. ಮಕ್ಕಳಿರದ ಈ ತಾತ ತಾನು ತನ್ನ ಮಡದಿಯ ಬದುಕಿನ ಬಂಡಿಗೆ 75ರ ಇಳಿವಯಸ್ಸಿನಲ್ಲೂ ನಾವಿಕನಾಗಿದ್ದಾನೆ.
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್, ಕುಂದಗೋಳ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/04/2022 05:06 pm