ಹುಬ್ಬಳ್ಳಿ: ಸಿನಿಮಾ ರಂಗಕ್ಕೆ ನಟರನ್ನು ನೀಡಿದ ಮೇರು ಕಲಾವಿದ ಬೀದಿ ಪಾಲಾಗಿರುವಂತ ಸ್ಥಿತಿ ನಿರ್ಮಾಣವಾಗಿದೆ. ಲೆಕ್ಕವಿಲ್ಲದಷ್ಟು ಪ್ರಶಸ್ತಿಗಳು ಬಂದರೂ ತುತ್ತು ಊಟಕ್ಕೂ ಪರದಾಡುವ ದುಸ್ಥಿತಿ ಈ ಹಿರಿಯ ರಂಗಚೇತನದ್ದಾಗಿದೆ. ನಾಟಕ ಪ್ರದರ್ಶನದಲ್ಲಿ ವಿಶ್ವ ದಾಖಲೆ ಮಾಡಿದ ಕೀರ್ತಿ ಹೊಂದಿ, ಗುಬ್ಬಿ ವೀರಣ್ಣ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳಿಗೆ ಭಾಜನವಾಗಿದ್ದರೂ, ಇಳಿ ವಯಸ್ಸಿನಲ್ಲಿ ಪಡಬಾರದ ಕಷ್ಟ ಪಡುವಂತಾಗಿದೆ.
ಹೌದು..ಐವತ್ತಕ್ಕೂ ಹೆಚ್ಚು ನಾಟಕಗಳ ರಚನೆ ಮಾಡಿ, ಸಾವಿರಾರು ನಾಟಕಗಳ ಪ್ರದರ್ಶನ ಮಾಡಿರುವ ಈ ಹಿರಿಯ ಕಲಾವಿದ ನಾಟಕ ಕಂಪನಿಯನ್ನೂ ಮುಚ್ಚಿ, ಮಗಳ ಗುಡಿಸಲಿನಲ್ಲಿ ಆಶ್ರಯ ಪಡೆಯುವಂತಾಗಿದೆ. ಇದು ಕಡಪಟ್ಟಿ ನಾಟಕ ಕಂಪನಿ ಮಾಲೀಕ ಪ್ರಕಾಶ್ ಕಡಪಟ್ಟಿ ಅವರ ದಯನೀಯ ಸ್ಥಿತಿ. ಇರುವುದಕ್ಕೆ ಮನೆ ಇಲ್ಲದೆ ಮಗಳ ಗುಡಿಸಲಿನಲ್ಲಿಯೇ ಆಶ್ರಯ ಪಡೆಯುವ ಅನಿವಾರ್ಯತೆ ಅವರದ್ದಾಗಿದೆ. ಕರ್ನಾಟಕದ ಮೂಲೆ ಮೂಲೆಗಳಲ್ಲಿ ನಾಟಕ ಪ್ರದರ್ಶಿದ ಕೀರ್ತಿ ಪ್ರಕಾಶ್ ಕಡಪಟ್ಟಿ ಅವರದ್ದಾಗಿದೆ. ಕಡಪಟ್ಟಿ ಶ್ರೀ ಗುರುಪ್ರಸಾದ ನಾಟ್ಯ ಸಂಘ ಅಸ್ತಿತ್ವಕ್ಕೆ ತಂದು ನೂರಾರು ಕಲಾವಿದರಿಗೆ ಆಶ್ರಯದಾತನಾಗಿದ್ದ ಪ್ರಕಾಶ್ ಅವರೇ ಈಗ ನಿರಾಶ್ರಿತರಾಗಿದ್ದಾರೆ. ಮೂಲತಃ ಬಾಗಲಕೋಟೆ ಜಿಲ್ಲೆ ಕಡಪಟ್ಟಿ ಗ್ರಾಮದವರಾದ ಪ್ರಕಾಶ್ ಅವರು, ಎಲ್ಲೂ ಆಸರೆ ಇಲ್ಲದೆ ಮಗಳ ಮನೆ ಸೇರಿದ್ದಾರೆ. ಸದ್ಯ ಧಾರವಾಡ ಜಿಲ್ಲೆಯ ಇನಾಂಕೊಪ್ಪ ಗ್ರಾಮದಲ್ಲಿ ಮಗಳ ಮನೆಯಲ್ಲಿ ವಾಸಿಸುತ್ತಿದ್ದಾರೆ. ರಂಗಭೂಮಿಯ ಹುಚ್ಚಿನಿಂದ ಊರೂರು ಸುತ್ತಿದ ಕಡಪಟ್ಟಿ ಅವರು ತಮ್ಮದೇ ಆದ ನಾಟಕ ಕಂಪನಿ ಕಟ್ಟಿ ವೃತ್ತಿ ರಂಗಭೂಮಿಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದರು. ಹುಬ್ಬಳ್ಳಿಯಲ್ಲಿ ಚೆನ್ನಪ್ಪ ಚನ್ನಗೌಡ ನಾಟಕ ಸಾವಿರ ಪ್ರದರ್ಶನ ಮಾಡಿ ವಿಶ್ವ ದಾಖಲೆ ನಿರ್ಮಾಣ ಮಾಡಿದ ಕೀರ್ತಿ ಪ್ರಕಾಶ್ ಕಡಪಟ್ಟಿ ಅವರದ್ದಾಗಿದೆ.
ಈಗಾಗಲೇ ಒಂದು ಕಣ್ಣನ್ನು ಕಳೆದುಕೊಂಡಿರುವ ಪ್ರಕಾಶ್ ಕಡಪಟ್ಟಿ, ಇರುವುದಕ್ಕೆ ಒಂದು ಸೂರೂ ಇಲ್ಲದೆ ಮಗಳ ಗುಡಿಸಲಿನಲ್ಲಿ ಆಶ್ರಯ ಪಡೆದಿದ್ದಾರೆ. ಕೊರೋನಾ ಕಾರಣದಿಂದಾಗಿ ಮಾಶಾಸನವೂ ಸರಿಯಾಗಿ ಬಾರದೆ ಹೈರಾಣಾಗಿದ್ದಾರೆ. ಕನಿಷ್ಟ ಒಂದು ಸೂರು ಮಾಡಿ ಎಂದು ಪ್ರಕಾಶ್ ಕಡಪಟ್ಟಿ ಸರ್ಕಾರವನ್ನು ಅಂಗಲಾಚುತ್ತಿದ್ದಾರೆ. ಯುವಕರಿಗೆ ರಂಗ ತರಬೇತಿ ನೀಡಿ ಹೇಗೋ ಜೀವನ ಸಾಗಿಸ್ತೇನೆ ಅನ್ನೋ ವಿಶ್ವಾಸದಲ್ಲಿ ಅವರಿದ್ದಾರೆ. ಪ್ರಶಸ್ತಿ ಕೊಟ್ಟ ಸರ್ಕಾರದಿಂದ ಮತ್ಯಾವುದೇ ನೆರವಿಲ್ಲ ಎಂಬ ಅಳಲು ವ್ಯಕ್ತವಾಗಿದೆ. ದರ್ಶನ್ ಹುಬ್ಬಳ್ಳಿಗೆ ಬಂದಾಗಲೆಲ್ಲಾ ಕಡಪಟ್ಟಿ ನಾಟಕ ಕಂಪನೀನ ನೆನೆಸಿಕೊಳ್ತಾರೆ. ಕಡಪಟ್ಟಿ ನಾಟಕ ಕಂಪನಿಯಲ್ಲಿ ಕೆಲಸ ಮಾಡಿದ್ದರಿಂದ ತಮ್ಮ ತಂದೆ ಮೈಸೂರಲ್ಲಿ ಮನೆ ಕಟ್ಟಿಸೋಕೆ ಸಾಧ್ಯವಾಯಿತೆಂದು ಸ್ಮರಿಸಿಕೊಂಡಿದಾರೆ. ಸ್ಮರಿಸಿಕೊಳ್ಳೋ ಜೊತೆಗೆ ಏನಾದರೂ ನೆರವು ನೀಡಿದರೆ ದೊಡ್ಡ ಉಪಕಾರವಾಗುತ್ತೆ ಅಂತಾರೆ ಪ್ರಕಾಶ್ ಕಡಪಟ್ಟಿ ಪುತ್ರಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/03/2022 10:32 am