ಧಾರವಾಡ: ನನ್ನ ಹುಟ್ಟೂರು ಧಾರವಾಡ. ತಾಯಿಯ ಅಸ್ಪಷ್ಟ ಮುಖ, ಎಮ್ಮೆ ಹಾಲು ಕುಡಿಯೋದು, ಓರ್ವ ವೃದ್ಧ, ಪೊಲೀಸರ ಮುಂದೆ ಅಳುತ್ತ ನಾನು ನಿಂತಿದ್ದ ದೃಶ್ಯವಷ್ಟೇ ನೆನಪಿದೆ. ನನ್ನ ಬಾಲ್ಯದ ಫೋಟೋವೊಂದು ಇದೆ. ಅದನ್ನು ಬಿಟ್ಟರೆ ನನ್ನ ಬಳಿ ಬೇರೆ ದಾಖಲೆಗಳಿಲ್ಲ. ಪ್ಲೀಸ್ ನನ್ನ ಮೂಲ ಯಾವುದೆಂದು ಹುಡುಕಲು ಸಹಕರಿಸಿ. ಪಾಲಕರು, ಸಂಬಂಧಿಕರು ಯಾರಾದರೂ ಇದ್ದರೆ ತಿಳಿಸಿ. ಅವರನ್ನು ನಾನು ಸೇರಬೇಕು, ನೋಡಬೇಕು ಎಂದು ನನ್ನ ಮನ ಹಂಬಲಿಸುತ್ತಿದೆ.
ಇದು ಸ್ವೀಡನ್ ಪ್ರಜೆ ಪಂತು ಜೋಹಾನ್ ಪಾಮ್ವಿಕ್ವಿಸ್ಟ್ ಎಂಬಾತ ಬೇಡಿಕೊಳ್ಳುತ್ತಿರುವ ಪರಿ. ಚಿಕ್ಕ ವಯಸ್ಸಿನ್ನಲ್ಲೇ ಧಾರವಾಡದ ಅನಾಥಾಶ್ರಮದಿಂದ 40 ವರ್ಷದ ಹಿಂದೆ ಸ್ವೀಡನ್ ಮೂಲದ ದಂಪತಿ ಪಂತುವನ್ನು ದತ್ತು ಪಡೆದಿದ್ದರು. ಸದ್ಯ ಪಂತುಗೆ 44 ವರ್ಷ ವಯಸ್ಸು. ಸ್ವೀಡನ್‌ನಲ್ಲಿ ಚಿತ್ರಕಲಾವಿದ ಆಗಿರುವ ಪಂತುಗೆ ತನ್ನ ಮೂಲ ನೆನಪಾಗಿದೆ. ಚಿಕ್ಕ ವಯಸ್ಸಿನಲ್ಲೇ ಪಾಲಕರಿಂದ ಕಳೆದು ಹೋಗಿದ್ದ ಪಂತುವನ್ನು ಪೊಲೀಸರು ಅನಾಥಾಶ್ರಮಕ್ಕೆ ಸೇರಿಸಿದ್ದರು. ಅನಾಥಾಶ್ರಮದಿಂದ ಸ್ವೀಡನ್ ದಂಪತಿ ಬಾಲಕ ಪಂತುನನ್ನು ದತ್ತು ಪಡೆದು ಸ್ವೀಡನ್ಗೆ ಕರೆದೊಯ್ದಿದ್ದರು.
ಇದೀಗ ಪಂತುಗೆ ಮೂಲ ಪಾಲಕರ ನೆನಪು ಕಾಡುತ್ತಿದೆ. ತನ್ನ ಬಾಲ್ಯದ ಫೋಟೋ ಸಮೇತ ಟ್ವೀಟರ್ ಮತ್ತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಪಂತು, ನನ್ನ ಬಳಿ ದಾಖಲೆಗಳಿಲ್ಲ. ಇದೊಂದೇ ಫೋಟೋ ಇರೋದು. ನನ್ನವರು ಯಾರಾದ್ರೂ ಇದ್ದರೆ ಪ್ಲೀಸ್ ನನ್ನ ಮೂಲ ತಿಳಿಸಿ, ಸಹಾಯಕ್ಕೆ ಬನ್ನಿ. ನಾನು ಧಾರವಾಡದವ. ತಾಯಿಯ ಅಸ್ಪಷ್ಟ ಮುಖ, ಎಮ್ಮೆ ಹಾಲು ಕುಡಿಯೋದು, ಓರ್ವ ವೃದ್ಧ, ಪೊಲೀಸರ ಮುಂದೆ ಅಳುತ್ತ ನಾನು ನಿಂತ ನೆನಪು ಮಾತ್ರ ಇದೆ ಎಂದು ಅಳಲು ತೋಡಿಕೊಳ್ಳುತ್ತಾ ಸೋಷಿಯಲ್ ಮೀಡಿಯಾ ಮೂಲಕ ತನ್ನವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಪಿಎಂ ಮತ್ತು ಸಿಎಂ ಕಚೇರಿಗೂ ಪೋಸ್ಟ್ ಟ್ಯಾಗ್ ಮಾಡಿದ್ದಾರೆ. ಈ ಹಿನ್ನೆಲೆ ಪಂತುವಿನ ಮೂಲ ಹುಡುಕುವಂತೆ ಧಾರವಾಡ ಎಸ್ಪಿಗೆ ಮೇಲಾಧಿಕಾರಿಗಳಿಂದ ಸೂಚನೆಯೂ ಬಂದಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/02/2022 04:34 pm