ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೇಜರ್ ಸಿದ್ಧಲಿಂಗಯ್ಯ ಹಿರೇಮಠಗೆ ಗ್ರಂಥ ಗೌರವ

ಧಾರವಾಡ: ದೇಶದ ಭಾವೀ ನಾಯಕರಾಗುವ ಮಕ್ಕಳಲ್ಲಿ ಅಕ್ಷರದ ಬೆಳಕನ್ನು ಬೆಳಗಿಸಿ, ಅವರಲ್ಲಿ ತಾತ್ವಿಕ ಚಿಂತನೆ, ಸಾತ್ವಿಕ ಸಂಸ್ಕಾರ, ಮೇರು ವ್ಯಕ್ತಿತ್ವವನ್ನು ಹುಟ್ಟುಹಾಕಿ ಉತ್ಕೃಷ್ಟ ಮಾನವ ಸಂಪನ್ಮೂಲದ ನಿರ್ಮಾಣ ಮಾಡುವ ಶಿಕ್ಷಣ ಇಲಾಖೆಗೆ ರಾಷ್ಟ್ರ ಕಟ್ಟುವ ಗುರುತರ ಹೊಣೆಗಾರಿಕೆ ಇದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ವಾಯವ್ಯ ಕರ್ನಾಟಕ ಬೆಳಗಾವಿ ವಿಭಾಗದ ನಿಕಟಪೂರ್ವ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಹೇಳಿದರು.

ಅವರು ತಮ್ಮ ವರ್ಗಾವಣೆ ನಿಮಿತ್ತ ಇಲಾಖೆಯ ಅಧಿಕಾರಿಗಳು ಹಾಗೂ ಕಚೇರಿ ಸಿಬ್ಬಂದಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಗ್ರಂಥ ಗೌರವವನ್ನು ಸ್ವೀಕರಿಸಿ ಮಾತನಾಡುತ್ತಿದ್ದರು.

ವಿದ್ಯಾರ್ಥಿಗಳು ಕೇವಲ ಬಾಯಿಪಾಠ ಮಾಡುವುದಷ್ಟೇ ಶಿಕ್ಷಣದ ಗುರಿಯಲ್ಲ. ಶುದ್ಧ ಬರಹ, ಸ್ಪಷ್ಟ ಓದು, ಓದಿದ್ದನ್ನು ಅರ್ಥೈಯಿಸಿಕೊಳ್ಳುವ ಜಾಣ್ಮೆ, ಚಿಂತನೆ, ಗಣಿತದ ಲೆಕ್ಕಾಚಾರದ ಮೂಲ ಪರಿಕಲ್ಪನೆಗಳ ಅರಿವು, ವೈಜ್ಞಾನಿಕ ಅನ್ವೇಷಣೆ, ವೈಚಾರಿಕತೆ, ದೇಶಭಕ್ತಿ, ನಾಯಕತ್ವ, ಸತ್ಯದ ಅನುಸಂಧಾನ, ಮುಕ್ತನೆಲೆಯ ಪಾರದರ್ಶಕ ಬದುಕನ್ನು ಹೊಂದುವಲ್ಲಿ ವಿದ್ಯಾರ್ಥಿಗಳಿಗೆ ಅತ್ಯಂತ ನಿಖರ ನೆಲೆಯಲ್ಲಿ ಮಾರ್ಗದರ್ಶನ ಮಾಡುವುದೇ ನಿಜವಾದ ಶಿಕ್ಷಣದ ಗುರಿಯಾಗಿದೆ ಎಂದರು.

ವಾಯವ್ಯ ಕರ್ನಾಟಕ ವಲಯದ 9 ಜಿಲ್ಲೆಗಳಲ್ಲಿ ಕಳೆದ 3 ವರ್ಷ 7 ತಿಂಗಳುಗಳ ಕಾಲ ನಡೆಸಿದ ವಿದ್ಯಾ ವಿಕಾಸದ ಸುಧಾರಣಾ ಕ್ರಮಗಳ ಫಲಶೃತಿ ತಮ್ಮೊಳಗೆ ವ್ಯಾಪಕ ಖುಷಿ, ಸಮಾಧಾನ, ಸಂತೃಪ್ತಿಯನ್ನು ತಂದಿದೆ. ತಮ್ಮ ಸುಧಾರಣಾ ಆಶಯಗಳಿಗೆ ಧನಾತ್ಮಕ ಸ್ಪಂದನೆ ನೀಡುವ ಜೊತೆಗೆ ಬದಲಾವಣೆಗೆ ತೆರೆದುಕೊಳ್ಳಲು ಹೆಜ್ಜೆ ಹಾಕಿದ ಶಿಕ್ಷಣ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿ ವರ್ಗಕ್ಕೆ ಕೃತಜ್ಞತೆ ಸಲ್ಲಿಸಿದ ಮೇಜರ್ ಹಿರೇಮಠ, ತಮಗೆ ಐಎಎಸ್ ಬಡ್ತಿ ಲಭಿಸಿದ ನಂತರ ಮತ್ತೆ ತಮ್ಮ ಅತ್ಯಂತ ಪ್ರೀತಿಯ ಶಿಕ್ಷಣ ಇಲಾಖೆಗೆ ಬಯಸಿ ಬರುವುದಾಗಿ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ವಾಯವ್ಯ ಕರ್ನಾಟಕ ಬೆಳಗಾವಿ ವಿಭಾಗದ ನೂತನ ಹೆಚ್ಚುವರಿ ಆಯುಕ್ತ ಸಿದ್ರಾಮಪ್ಪ ಎಸ್. ಬಿರಾದಾರ ಮಾತನಾಡಿ, ಮೇಜರ್ ಹಿರೇಮಠ ಅವರು ಕೈಕೊಂಡಿದ್ದ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಣೆಯ ಎಲ್ಲ ಕ್ರಮಗಳನ್ನು ಮುಂದುವರೆಸುವೆ. ಶಿಕ್ಷಕ ವೃತ್ತಿಗೆ ನೇಮಕಗೊಂಡ ಎಲ್ಲಾ ಶಿಕ್ಷಕ-ಶಿಕ್ಷಕಿಯರೂ ಸಮಯ ಪಾಲನೆಯೊಂದಿಗೆ ನಿಯಮಿತವಾಗಿ ಶಾಲೆಗಳಿಗೆ ಹಾಜರಾಗಿ ಪಾಠ ಮಾಡಲೇಬೇಕು. ಶಾಲೆಗಳಿಂದ ಹೊರಗುಳಿದು ಅನ್ಯಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಶಿಕ್ಷಕ-ಶಿಕ್ಷಕಿಯರನ್ನು ಕ್ಷಮಿಸುವದಿಲ್ಲ.

ವೃತ್ತಿಯೊಂದಿಗೆ ಹೊಸತನ ಅಳವಡಿಸಿಕೊಂಡು ವಿದ್ಯಾರ್ಥಿಗಳು ಮೆಚ್ಚುವ ಮೇರು ಶಿಕ್ಷಕರಾಗಲು ಇಲಾಖೆಯ ಬೋಧಕ ಬಳಗ ಬಯಸಬೇಕು. ಸಮಾಜಮುಖಿ ಚಿಂತನೆಯ ವಿಸ್ತೃತ ಆಶಯಗಳಿಗೆ ತಾವು ಇಲಾಖೆಯಲ್ಲಿ ತೆಗೆದುಕೊಳ್ಳುವ ಶಿಕ್ಷಣ ಜಾಗೃತಿ ನಿರ್ಣಯಗಳಿಗೆ ಇಲಾಖೆಯ ಭಾಗೀದಾರರೆಲ್ಲರೂ ಸ್ಪಂದಿಲೇಬೇಕು. ತಮಗೆ ಉಪನ್ಯಾಸ ವೃತ್ತಿಯ ಮೇಲೆಯೇ ಅಧಿಕ ಆಸಕ್ತಿ ಇತ್ತಾದರೂ ಕೆ.ಎ.ಎಸ್. ತೇರ್ಗಡೆಯಾಗುವ ಮೂಲಕ ಆಡಳಿತ ನಡೆಸುವ ವೃತ್ತಿಗೆ ಬರುವುದು ಅನಿವಾರ್ಯವಾಯಿತು ಎಂದ ಬಿರಾದಾರ ಅವರು, ಶಿಕ್ಷಣ ಇಲಾಖೆಯಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಸೇವೆಗೈದ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಅವರನ್ನು ಅಭಿನಂದಿಸಿದರು.

ಶಿಕ್ಷಣ ಇಲಾಖೆಯಿಂದ ವರ್ಗಾವಣೆ ಹೊಂದಿರುವ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಅವರಿಗೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದ ಪರವಾಗಿ ನೂತನ ಹೆಚ್ಚುವರಿ ಆಯುಕ್ತ ಸಿದ್ರಾಮಪ್ಪ ಎಸ್. ಬಿರಾದಾರ ಗ್ರಂಥ ಗೌರವ ನೀಡಿ ಬೀಳ್ಕೊಟ್ಟರು.

Edited By : Nirmala Aralikatti
Kshetra Samachara

Kshetra Samachara

19/10/2021 06:29 pm

Cinque Terre

23.27 K

Cinque Terre

0

ಸಂಬಂಧಿತ ಸುದ್ದಿ