ಹುಬ್ಬಳ್ಳಿ: ಮೇಘ ಸ್ಪೋಟಕ್ಕೆ ಮತ್ತೊಮ್ಮೆ ಉತ್ತರ ತತ್ತರಿಸಿ ಹೋಗಿದೆ. ನೋಡ ನೋಡುತ್ತಿದ್ದಂತೆ ಗುಡ್ಡಗಳು ಕುಸಿಯುತ್ತಿವೆ. ಹೀಗೆ ಗುಡ್ಡಗಾಡುಗಳ ನಡುವೆ ಸಾಗುತ್ತಿದ್ದ ರೈಲ್ವೆ ಮೇಲೆ ಗುಡ್ಡ ಕುಸಿದಾಗ, ರೈಲಿನಲ್ಲಿದ್ದ ಪ್ರಯಾಣಿಕರನ್ನು ಆ ಮೂರು ಸಿಬ್ಬಂದಿ ರಕ್ಷಣೆ ಮಾಡಿದ ರೋಚಕ ಸ್ಟೋರಿ ಇಲ್ಲಿದೆ.
ಜುಲೈ 23 ಬೆಳಿಗ್ಗೆ 6.10 ಕ್ಕೆ ಕುಲೇಮ್ ನಿಂದ ಕ್ಯಾಸರ ಲಾಕ ಕಡೆಗೆ ಈ ರೈಲನ್ನು ಓಡಿಸುತ್ತಿರುವಾಗ ದೂದಸಾಗರ್- ಸೋನಾಲಿಮ್ ಭಾಗದಲ್ಲಿ ಇದ್ದಕ್ಕಿಂದಂತೆ ಗುಡ್ಡ ಕುಸಿದಿದೆ. ನೋಡ ನೋಡುತ್ತಿದ್ದಂತೆ ರೈಲ್ವೆ ಮೇಲೆ ಗುಡ್ಡದ ಮಣ್ಣು ಕುಸಿಯುತ್ತಿದ್ದರೂ ಎದೆಗುಂದದೆ ರೈಲ್ವೆ ಮುಂಭಾಗದ ಇಂಜಿನ್ ಲೋಕೋ ಪೈಲಟ್ ರಣಜಿತ್ ಕುಮಾರ್, ತುರ್ತು ಬ್ರೇಕ್ ಪ್ರಯೋಗಿಸಿ ರೈಲನ್ನು ನಿಲ್ಲಿಸಿದ್ದಾರೆ. ಟ್ರ್ಯಾಕ್ ನ ಮೇಲೆ ಮಣ್ಣಿನ ರಾಶಿ, ಬಂಡೆಗಳು ಬಿದ್ದಿದ್ದರಿಂದ ಬ್ರೇಕ್ ಹಾಕಿದರೂ ಗಾಲಿಗಳ ಸಮೇತವಾಗಿ ಇಂಜಿನ್ ಹಳಿ ತಪ್ಪಿತ್ತು. ಆಗ ತಕ್ಷಣ ದೂದಸಾಗರ್ ನಿಲ್ದಾಣದ ಸ್ಟೇಷನ್ ಮಾಸ್ಟರ್ ಗೆ ವಿಷಯ ತಿಳಿಸಿ ಹುಬ್ಬಳ್ಳಿಯ ನಿಯಂತ್ರಣ ಕಛೇರಿಗೆ ಮಾಹಿತಿ ನೀಡುವಂತೆ ಹೇಳಿದ್ದಾರೆ. ತುರ್ತು ಬ್ರೇಕ್ ಪ್ರಯೋಗವಾಗುತ್ತಿರುವುದನ್ನು ಗಮನಿಸಿದ ರೈಲಿನ ಗಾರ್ಡ್ ಶೈಲೇಂದರ್ ಕುಮಾರ್ ರೈಲಿನ ಕೊನೆಯಲ್ಲಿರುವ ಬ್ರೇಕ್ವ್ಯಾನ್ ನ ಹ್ಯಾಂಡ್ ಬ್ರೇಕ್ ಅನ್ನು ಪ್ರಯೋಗಿಸಿ ಇಂಜಿನ್ ನ ಹತ್ತಿರ ಹೋಗಿದ್ದಾರೆ. ಇದೇ ಸಮಯದಲ್ಲಿ ಗಾರ್ಡ್ ಮತ್ತು ಲೋಕೋಪೈಲಟ್ ಗಳು ಮುಂದಿನ ಮತ್ತು ಹಿಂಭಾಗದ ಇಂಜಿನ್ ಗಳ ಸಹಾಯಕ ಲೋಕೋ ಪೈಲಟ್ ಗಳಿಗೆ ಟ್ರ್ಯಾಕ್ ನ ಎರಡೂ ದಿಕ್ಕಿನಲ್ಲಿ ನಿಗದಿತ ಅಂತರದಲ್ಲಿ ಡೆಟೋನೇಟರ್ ಗಳನ್ನು ಇಡುವಂತೆ ಸೂಚಿಸಿದ್ದರು. ರೈಲನ್ನು ಸರಪಳಿಯ ಮೂಲಕ ಹಳಿಗಳೊಂದಿಗೆ ಬಂಧಿಸಿ ಭದ್ರಪಡಿಸಿದ್ದರು, ವ್ಹೀಲ್ ಸ್ಕಿಡ್ ಗಳನ್ನು ಇರಿಸಿ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಬಹುದೊಡ್ಡ ಅನಾಹುತ ತಪ್ಪಿಸಿದ್ದರು.
ರೈಲ್ವೆ ಮುಂಭಾಗದ ಇಂಜಿನ್ ಹಿಂದಿರುವ ಮೊದಲ ಬೋಗಿಯ ಮೇಲೆ ಮಣ್ಣು ಬೀಳುತ್ತಿರುವುದನ್ನು ರಣಜೀತ್ ಮತ್ತು ಶೈಲೇಂದರ್ ಗಮನಿಸಿ, ಸುರಕ್ಷತೆಗಾಗಿ ಮೊದಲ 3 ಬೋಗಿಗಳಲ್ಲಿದ್ದ ಪ್ರಯಾಣಿಕರನ್ನು ಬೇರೆ ಬೋಗಿಗಳಿಗೆ ಸ್ಥಳಾಂತರಿಸಿದ್ದಾರೆ. ಮಣ್ಷು ಬಿದ್ದಿರುವ ಈ ಮೂರು ಬೋಗಿಗಳನ್ನ ರೈಲಿನ ಉಳಿದ ಬೋಗಿಗಳಿಂದ ಪ್ರತ್ಯೇಕಿಸಿದ್ದರು. ರೈಲ್ವೆ ಹಿಂಭಾಗದಲ್ಲಿ ಅಳವಡಿಸಲಾಗಿದ್ದ ಇಂಜಿನ್‌ಗಳ ಸಹಾಯದಿಂದ 345 ಪ್ರಯಾಣಿಕರಿದ್ದ ರೈಲನ್ನು ಕುಲೇಮ್ ನಿಲ್ದಾಣಕ್ಕೆ ಗಾರ್ಡ್ ಶೈಲೇಂದರ್ ಕುಮಾರ್, ಲೋಕೋ ಪೈಲಟ್ ಎಸ್.ಡಿ.ಮೀನಾ, ಸಹಾಯಕ ಲೋಕೋ ಪೈಲಟ್ ಎಸ್.ಕೆ.ಸೈನಿ ರೈಲನ್ನು ಸುರಕ್ಷಿತವಾಗಿ ಕುಲೇಮ್ಗೆ ಕೊಂಡೊಯ್ದಿದ್ದಾರೆ. ರಣಜಿತ್ ಕುಮಾರ್ ಮತ್ತು ಹಶೀದ್ ಕೆ. ಹಳಿ ತಪ್ಪಿದ ಇಂಜಿನ್ ಬಳಿ ಪರಿಹಾರ ಕಾರ್ಯಾಚರಣೆಗೆ ನೆರವಾಗಲು ಉಳಿದುಕೊಂಡು ಪ್ರಯಾಣಿಕರ ರಕ್ಷಣೆ ಮಾಡಿದ್ದಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮಲ್ಲೇಶ ಸೂರಣಗಿ,
ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
Kshetra Samachara
28/07/2021 07:24 pm