ವರದಿ: ಈರಣ್ಣ ವಾಲಿಕಾರ
ಹುಬ್ಬಳ್ಳಿ: ಕೊರೊನಾ ಲಾಕ್‌ಡೌನ್ ಪರಿಣಾಮ ಅದೆಷ್ಟೋ ಯುವಕರು ಕೆಲಸ ಕಳೆದುಕೊಂಡು ಮನೆ ಸೇರಿದ್ದಾರೆ. ಇಂತಹ ಸಮಯದಲ್ಲಿ ಇಲ್ಲೊಂದು ಸ್ನೇಹ ಕುಟುಂಬ ಸ್ವಂತ ಉದ್ಯೋಗ ಆರಂಭಿಸಿ ಅನೇಕರಿಗೆ ಉದ್ಯೋಗ ನೀಡಿ ಹೊಸ ಜೀವನ ಕಟ್ಟಿಕೊಂಡಿದ್ದಾರೆ.
ಹೀಗೆ ಕೈಯಲ್ಲಿ ಮೊಲಗಳನ್ನು ಹಿಡಿದು ನಿಂತಿರುವ ಯುವಕರ ಹೆಸರು ವೀರೇಶ್ ಚಂದರಗಿ ಹಾಗೂ ಅವರ ಸ್ನೇಹಿತರು. ಇವರು ಮೂಲತಃ ಹುಬ್ಬಳ್ಳಿಯವರಾಗಿದ್ದು, ಹುಬ್ಬಳ್ಳಿ ಮತ್ತು ಮಿಶ್ರಿಕೋಟಿ ಗ್ರಾಮದ ಮಧ್ಯದಲ್ಲಿ ಓಜ್ಯಾ ರ‍್ಯಾಬಿಟ್ ಫಾರ್ಮ್ ನಡೆಸುತ್ತಿದ್ದಾರೆ.
ಕೇವಲ ಮೂರು ಯುನಿಟ್‌ನಿಂದ ಮೊಲದ ಬಿಸಿನೆಸ್ ಪ್ರಾರಂಭಿಸಿ, ಸದ್ಯ 200ಕ್ಕೂ ಹೆಚ್ಚು ಮೊಲಗಳ ಸಾಕಾಣಿಕೆ ಮೂಲಕ ಹೆಚ್ಚು ಆದಾಯ ಗಳಿಸುತ್ತಿದ್ದಾರೆ. ಯು.ಎಸ್ ವೈಟ್, ಸೋವಿಯತ್ ಚಿಂಚಿಲಾ, ಪ್ಲೇಮಿಶ್ ಜೈಂಟ್, ಅಲಸ್ಕಾ ಹಾಗೂ ನ್ಯೂಜಿಲೆಂಡ್ ವೈಟ್ ಸೇರಿದಂತೆ ಐದು ತಳಿಗಳನ್ನು ಸಾಕಿ ಜೀವನಕ್ಕೆ ದಾರಿ ಕಂಡುಕೊಂಡಿದ್ದಾರೆ.
ಇನ್ನೂ ಲಾಕ್‌ಡೌನ್ ಸಮಯವನ್ನು ಸದುಪಯೋಗ ಮಾಡಿಕೊಂಡ ಯುವಕರು, ಮೊಲದ ಬಿಸಿನೆಸ್ ಮೂಲಕ ಸ್ವತಃ ಉದ್ಯೋಗ ಕಂಡುಕೊಂಡಿದ್ದಾರೆ. ಜೊತೆಗೆ ಇತರರಿಗೆ ಉದ್ಯೋಗದತ್ತ ಮುಖ ಮಾಡುವಂತೆ ಸಲಹೆ ನೀಡುತ್ತಿದ್ದಾರೆ.
ಮೊಲ ಸಾಕಾಣಿಕೆ ಜೊತೆಗೆ ಮೊಲಗಳಿಗೆ ವೈದ್ಯರ ಸಲಹೆಯಂತೆ ಔಷಧಿ ನೀಡಲಾಗುತ್ತದೆ. ಫೀಡ್, ಗರಿಕೆ, ಕುದುರೆ ಮೆಂತೆ ಹಾಗೂ ಕೈ ತಿಂಡಿಗಳಂತ ಉತ್ತಮ ಗುಣಮಟ್ಟದ ಆಹಾರವನ್ನು ಮೊಲಗಳಿಗೆ ನೀಡುತ್ತೇವೆ. ಇದರಿಂದಾಗಿ ಮೊಲಗಳು ಹೆಚ್ಚು ಆರೋಗ್ಯದಿಂದ ಇರುತ್ತವೆ ಎನ್ನುತ್ತಾರೆ ರೈತ ವೀರೇಶ್.
ಕಡಿಮೆ ವೆಚ್ಚದಲ್ಲಿ ಹೆಚ್ಚು ಆದಾಯದ ಜೊತೆಗೆ ನಿರುದ್ಯೋಗ ಹೋಗಲಾಡಿಸಲು ಹೊಸ ಪ್ರಯತ್ನ ಕಂಡು ಕೊಂಡ ಯುವಕರ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಆಸಕ್ತಿಯಿಂದ ಬಂದವರಿಗೆ ಉಚಿತವಾಗಿ ಟ್ರೇನಿಂಗ್ ಕೂಡ ಕೊಡುತ್ತಿದ್ದಾರೆ.
ಒಟ್ಟಿನಲ್ಲಿ ಉದ್ಯೋಗ ಇಲ್ಲ ಎಂದು ಅಲೆದಾಡುವ ಯುವಕರ ನಡುವೆಯೂ, ಕಡಿಮೆ ವೆಚ್ಚದಲ್ಲಿ ಹೆಚ್ಚು ಆದಾಯದ ಜೊತೆಗೆ ಇನ್ನಿತರ ಯುವಕರಿಗೆ ಉದ್ಯೋಗ ನೀಡುತ್ತಿರುವ ಸ್ನೇಹಿತರ ಕಾರ್ಯ ಎಲ್ಲರೂ ಮೆಚ್ಚುವಂತದ್ದು....!
ಹೆಚ್ಚಿನ ಮಾಹಿತಿಗಾಗಿ: 7624930803 ಸಂಪರ್ಕಿಸಬಹುದು.
Kshetra Samachara
29/01/2021 02:04 pm